ಸಾರಾಂಶ
ಸ್ಪೇನ್‌ನ ಸಿ295 ಅತ್ಯಾಧುನಿಕ ವಿಮಾನಗಳ ಉತ್ಪಾದನೆ ಇನ್ನು ಭಾರತದಲ್ಲೇ ಆರಂಭವಾಗಲಿದ್ದು, ಇದನ್ನು ಭಾರತದಲ್ಲಿ ನಿರ್ಮಿಸಲಿರುವ ಟಾಟಾ-ಏರ್‌ಬಸ್ ವಿಮಾನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪ್ಯಾನಿಶ್ ಪ್ರಧಾನಿ ಪೆರ್ವೋ ಸ್ಯಾಂಚೆಜ್ ಇಲ್ಲಿ ಜಂಟಿಯಾಗಿ ಉದ್ಘಾಟಿಸಿದರು.
ವಡೋದರಾ : ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ295 ಅತ್ಯಾಧುನಿಕ ವಿಮಾನಗಳ ಉತ್ಪಾದನೆ ಇನ್ನು ಭಾರತದಲ್ಲೇ ಆರಂಭವಾಗಲಿದ್ದು, ಇದನ್ನು ಭಾರತದಲ್ಲಿ ನಿರ್ಮಿಸಲಿರುವ ಟಾಟಾ-ಏರ್‌ಬಸ್ ವಿಮಾನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪ್ಯಾನಿಶ್ ಪ್ರಧಾನಿ ಪೆರ್ವೋ ಸ್ಯಾಂಚೆಜ್ ಸೋಮವಾರ ಇಲ್ಲಿ ಜಂಟಿಯಾಗಿ ಉದ್ಘಾಟಿಸಿದರು.
ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಂತಾಗಿದೆ ಹಾಗೂ ವಡೋದರಾದಲ್ಲಿರುವ ಟಾಟಾ ವಿಮಾನ ಘಟಕವು ದೇಶದ ಮೊದಲ ಖಾಸಗಿ ಸೇನಾ ವಿಮಾನ ಉತ್ಪಾದನಾ ಘಟಕ ಎನ್ನಿಸಿಕೊಳ್ಳಲಿದೆ. ಸೇನಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಇದನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಟಾಟಾ ಘಟಕವು ಸ್ಪೇನ್-ಭಾರತದ ಸಂಬಂಧ ಗಟ್ಟಿಗೊಳುಸುವುದು ಮಾತ್ರವಲ್ಲ. ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್’ (ಭಾರತದಲ್ಲಿ ಉತ್ಪಾದಿಸಿ, ವಿಶ್ವಕ್ಕೆಂದು ಉತ್ಪಾದಿಸಿ) ಆಂದೋಲನಕ್ಕೆ ವೇಗ ನೀಡಲಿದೆ. ಸಿ-295 ವಿಮಾನ ಭಾರತದ ಹೊಸ ಕೆಲಸದ ಸಂಸ್ಕೃತಿಯ ಪ್ರತೀಕ’ ಎಂದು ಹರ್ಷಿಸಿದರು.
‘10 ವರ್ಷದ ಹಿಂದೆ ರಕ್ಷಣಾ ಸಾಮಗ್ರಿಗಳ ಆಮದು ಆಗುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಕ್ರಮಗಳಿಂದ ಈಗ ಭಾರತದಲ್ಲೇ ಸಾಮಗ್ರಿಗಳು ಉತ್ಪಾದನೆ ಆಗುವಂತಾಗಿದೆ. ಣಾವು ಭಾರತಕ್ಕೆ ಹೊಸ ಗುರಿ ಇಟ್ಟುಕೊಂಡಿದ್ದೇವೆ. ಇಂಥ ಸಾಧನೆ ಸಾಕಾರವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ಟಾಟಾ ಕಂಪನಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು.
2022ರಲ್ಲಿ ಟಾಟಾ ಏರ್‌ಬಸ್ ವಿಮಾನ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಭಾರತದಲ್ಲೇ 40 ಸಿ295 ವಿಮಾನ ಉತ್ಪಾದನೆ: 6 ದಶಕದಿಂದ ಭಾರತದ ಸಶಸ್ತ್ರಪಡೆಗಳು ಆವ್ರೋ-748 ಸರಕು ವಿಮಾನ ಬಳಸುತ್ತಿದ್ದವು. ಅದು ಹಳತಾದ ಕಾರಣ ಈ ಸಿ-295 ಮೊರೆ ಹೋಗಿವೆ.
ಸಿ295 ವಿಮಾನವನ್ನು ಮೊದಲು ಸ್ಪೇನ್‌ನ ಕಾಸಾ ಕಂಪನಿ ನಿರ್ಮಿಸಿತ್ತು. ಈಗ ಕಾಸಾ ಏರ್‌ಬಸ್ ಕಂಪನಿಯ ಭಾಗವಾಗಿದೆ. ಇದೀಗ ಏರ್‌ಬಸ್ ಕಂಪನಿ ಜತೆಗೂಡಿ ಟಾಟಾ ವಿಮಾನ ಘಟಕವು ವಡೋದರಾದಲ್ಲಿ ಸಿ295 ವಿಮಾನ ಉತ್ಪಾದಿಸಲಿದೆ.
ಸ್ಪೇನ್‌ನ ಕಾಸಾ ಹಾಗೂ ಏರ್‌ಬಸ್ ಜತೆ ಭಾರತವು 2021ರಲ್ಲಿ 21,935 ಕೋಟಿ ರು. ಮೌಲ್ಯದಲ್ಲಿ 56 ‘ಸಿ295’ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 16 ಸ್ಪೇನ್‌ನಿಂದ ಬರಲಿದ್ದು, ಉಳಿ 40 ಭಾರತದಲ್ಲಿ ಉತ್ಪಾದನೆ ಆಗಬೇಕು ಎಂಬ ಒಪ್ಪಂದವಿದೆ.
ಈ ಪ್ರಕಾರ ವಡೋದರಾ ಟಾಟಾ ಘಟಕವು 2026ರಲ್ಲಿ ಮೊದಲ ಸಿ295 ವಿಮಾನ ಉತ್ಪಾದಿಸಲಿದೆ. ಉಳಿದ 39 ವಿಮಾನಗಳು 2031ರೊಳಗೆ ನಿರ್ಮಾಣ ಆಗಲಿವೆ.