ಸಾರಾಂಶ
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಪ್ರಧಾನಿ ನರೇಮದ್ರ ಮೋದಿ ಶನಿವಾರ 11 ಸಾವಿರ ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿ, 6 ವಂದೇಭಾರತ್, 2 ಅಮೃತ್ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ನವದೆಹಲಿ: ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ, ಮರು ಅಭಿವೃದ್ಧಿಗೊಂಡ ರೈಲು ನಿಲ್ದಾಣ ಸೇರಿದಂತೆ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ 11 ಸಾವಿರ ಕೋಟಿ ರು. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಇದೇ ವೇಳೆ 6 ವಂದೇ ಭಾರತ್ ರೈಲು ಹಾಗೂ 2 ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದು, ವಿಶ್ವ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ₹4600 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ಆಧುನಿಕ ಅಭಿವೃದ್ಧಿ, ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಪ್ರಧಾನಿ ಮೋದಿ ಅವರ ಕನಸಾಗಿದೆ. ನಗರದ ಶ್ರೀಮಂತ ಇತಿಹಾಸ ಮತ್ತು ಪರಂಪರೆಗೆ ಅನುಗುಣವಾಗಿ ಸಂಪರ್ಕವನ್ನು ಸುಧಾರಿಸುವ ಮತ್ತು ಅದರ ನಾಗರಿಕ ಸೌಲಭ್ಯಗಳನ್ನು ನವೀಕರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.ಮೊದಲ ಹಂತದ ಅತ್ಯಾಧುನಿಕ ವಿಮಾನ ನಿಲ್ದಾಣವನ್ನು ₹1450 ಕೊಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರಲಿದ್ದು, ವಾರ್ಷಿಕವಾಗಿ 10 ಲಕ್ಷ ಜನರಿಗೆ ಸೇವೆ ನೀಡಲು ಸಜ್ಜಾಗಿದೆ. ಈ ಭಾಗದಲ್ಲಿ ರೈಲ್ವೆ ಸೌಲಭ್ಯಗಳನ್ನು ಸುಧಾರಿಸಲು ₹2300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ರಾಮ ಮಂದಿರಕ್ಕೆ ಪ್ರವೇಶವನ್ನು ಹೆಚ್ಚಿಸಲು ನಾಲ್ಕು ರಸ್ತೆಗಳಾದ ರಾಮಪಥ, ಭಕ್ತಿಪಥ, ಧರ್ಮಪಥ ಮತ್ತು ಶ್ರೀ ರಾಮ ಜನ್ಮಭೂಮಿ ಪಥಗಳನ್ನು ಸಹ ಅವರು ಉದ್ಘಾಟಿಸಲಿದ್ದಾರೆ.