ಉತ್ತರ ಪ್ರದೇಶದ ಪ್ರಯಾಗರಾಜ್‌ನ ಕುಂಭಮೇಳದ ಸ್ಥಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ತನ್ನ ಗಾಜುಗಣ್ಣಿನಿಂದಲೇ ಎಲ್ಲರ ಗಮನ ಸೆಳೆದಿದ್ದ ಮೊನಾಲಿಸಾಳನ್ನು ಕೇರಳದ ಚೆಮ್ಮನೂರ್‌ ಜ್ಯೂವೆಲ್ಲರಿ ತನ್ನ ಪ್ರಚಾರ ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ.

ಕಲ್ಲಿಕೋಟೆ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಕುಂಭಮೇಳದ ಸ್ಥಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ತನ್ನ ಗಾಜುಗಣ್ಣಿನಿಂದಲೇ ಎಲ್ಲರ ಗಮನ ಸೆಳೆದಿದ್ದ ಮೊನಾಲಿಸಾಳನ್ನು ಕೇರಳದ ಚೆಮ್ಮನೂರ್‌ ಜ್ಯೂವೆಲ್ಲರಿ ತನ್ನ ಪ್ರಚಾರ ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ಬಾಬಿ ಚೆಮ್ಮನೂರ್‌, ಮೋನಾಲಿಸಾ ಶುಕ್ರವಾರ ಕೇರಳದ ಕಲ್ಲಿಕೋಟೆಗೆ ಆಗಮಿಸಲಿದ್ದಾರೆ. ಅಲ್ಲಿ ಅವರನ್ನು ಕಂಪನಿಯ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗುವುದು. ಅವರಿಗೆ 15 ಲಕ್ಷ ರು. ಸಂಭಾವನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

 ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ಜಲ ಸಮಾಧಿ

ಅಯೋಧ್ಯಾ: ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಗುರುವಾರ ಸರಯೂ ನದಿಯಲ್ಲಿ ಜಲಸಮಾಧಿ ಮಾಡಲಾಯಿತು. ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ಅವರು ನಿಧನರಾಗಿದ್ದರು.ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ನಗರದಾದ್ಯಂತ ಮೆರವಣಿಗೆ ಮಾಡಿ, ಸರಯೂ ತೀರದ ತುಳಸಿದಾಸ ಘಾಟ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಮೃತದೇಹಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಜಲಸಮಾಧಿ ಮಾಡಲಾಯಿತು.

1992ರ ಬಾಬರಿ ಮಸೀದಿ ಧ್ವಂಸ ವೇಳೆ ಸತ್ಯೇಂದ್ರ ದಾಸ್ ಅಯೋಧ್ಯೆ ಮಂದಿರದಲ್ಲಿ ಅರ್ಚಕರಾಗಿದ್ದರು. ಸರ್ಕಾರ ದೇಗುಲವನ್ನು ನಿಯಂತ್ರಣಕ್ಕೆ ಪಡೆದ ಬಳಿಕ ಪ್ರಧಾನ ಅರ್ಚಕರಾಗಿ ನೇಮಿಸಲಾಗಿತ್ತು.

ರಷ್ಯಾದಲ್ಲಿ ಗಾಂಧೀಜಿ ಚಿತ್ರ ಇರುವ ಬಿಯರ್‌ ಮಾರಾಟ

 ನವದೆಹಲಿ: ರಷ್ಯಾದ ಬಿಯರ್‌ ಕಂಪನಿಯೊಂದು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರ ಮತ್ತು ಸಹಿಯನ್ನು ಬಾಟಲಿ ಮೇಲೆ ಬಳಸಿ ಮಾರಾಟಮಾಡುತ್ತಿದೆ. ಇದು ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ. ರೆವರ್ಟ್‌ ಎಂಬ ಕಂಪನಿಯ ಬಿಯರ್‌ ಬಾಟಲಿಯಲ್ಲಿ ಗಾಂಧೀಜಿ ಅವರ ಚಿತ್ರ ಮತ್ತು ಸಹಿ ಇರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಚಿತ್ರಗಳು ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಮನವಿ ಮಾಡಿದ್ದಾರೆ. ಇದು ಭಾರತೀಯರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಮಕ್ಕಳ್‌ ನೀಧಿ ಪಕ್ಷದ ಅಧ್ಯಕ್ಷ ಕಮಲ್‌ಹಾಸನ್‌ ಡಿಎಂಕೆಯಿಂದ ರಾಜ್ಯಸಭೆಗೆ

ಚೆನ್ನೈ: ಖ್ಯಾತ ಚಲನಚಿತ್ರ ನಟ, ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ಅಧ್ಯಕ್ಷ ಕಮಲ್‌ಹಾಸನ್‌ ಅವರನ್ನು ತನ್ನ ಕೋಟಾದಿಂದ ರಾಜ್ಯಸಭೆಗೆ ಕಳುಹಿಸಲು ತಮಿಳುನಾಡಿನ ಡಿಎಂಕೆ ನಿರ್ಧರಿಸಿದೆ. ಈ ನಿರ್ಧಾರದ ಬೆನ್ನಲ್ಲೇ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್, ಕಮಲ್‌ ಹಾಸನ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. 2018ರಲ್ಲಿ ಕಮಲ್ ಹಾಸನ್ ಮಕ್ಕಳ್ ನೀಧಿ ಮೈಯ್ಯಂ ಪಕ್ಷ ಸ್ಥಾಪಿಸಿದ್ದರು. 2024ರ ಲೋಕಸಭಾ ಚುನಾವಣೆಯ ಸಂದರ್ಭ ಕಮಲ್‌ ಪಕ್ಷ ಡಿಎಂಕೆ ಜೊತೆಮೈತ್ರಿ ಮಾಡಿಕೊಂಡಿತ್ತು. ಆಗ ಕಮಲ್ ಹಾಸನ್ ಅವರಿಗೆ ರಾಜ್ಯಸಭಾ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.

ದಲೈ ಲಾಮಾ, ಸಂಬಿತ್‌ ಪಾತ್ರಗೆ ಝಡ್‌ ಪ್ಲಸ್‌ ಭದ್ರತೆಗೆ ನಿರ್ಧಾರ

ನವದೆಹಲಿ: ಟಿಬೆಟ್‌ನ ಬೌದ್ಧ ಗುರು ದಲೈ ಲಾಮಾ ಮತ್ತು ಬಿಜೆಪಿಯ ಪುರಿ ಸಂಸದ ಸಂಬಿತ್‌ ಪಾತ್ರ ಅವರಿಗೆ ಕೇಂದ್ರ ಸರ್ಕಾರ ಝಡ್‌ ಪ್ಲಸ್‌ ಭದ್ರತೆ ಒದಗಿಸಿ ಆದೇಶ ಹೊರಡಿಸಿದೆ. ದಲೈ ಲಾಮಾ ಅವರಿಗೆ ಸಂಭಾವ್ಯ ಬೆದರಿಕೆ ಇರುವ ಕಾರಣ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಒದಗಿಸಲಾಗಿದೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ ವಿಐಪಿ ಭದ್ರತಾ ಅಂಗವು 30 ಸಶಸ್ತ್ರ ಸಿಬ್ಬಂದಿಗಳ ಭದ್ರತೆಯನ್ನು ಒದಗಿಸಲಿದೆ. ಮತ್ತೊಂದೆಡೆ ಬಿಜೆಪಿ ಸಂಸದ ಸಂಬಿತ್‌ ಪಾತ್ರ ಅವರಿಗೆ ಮಣಿಪುರದಲ್ಲಿ ಮಾತ್ರ ಝಡ್‌ ಪ್ಲಸ್‌ ಭದ್ರತೆ ಒದಗಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.