ಸಾರಾಂಶ
ಉದ್ಯೋಗಕ್ಕಾಗಿ ನಗದು ಲಂಚ ಸ್ವೀಕರಿಸಿದ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) 9 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಡಿಎಂಕೆ ನಾಯಕ, ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ, ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಚೆನ್ನೈ: ಉದ್ಯೋಗಕ್ಕಾಗಿ ನಗದು ಲಂಚ ಸ್ವೀಕರಿಸಿದ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) 9 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಡಿಎಂಕೆ ನಾಯಕ, ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ, ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಬಂಧಿತರಾಗಿದ್ದ ಸೆಂಥಿಲ್‌ರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ರಾಜ್ಯಪಾಲ ಆರ್‌ಎನ್ ರವಿ ಈ ಹಿಂದೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಸೂಚನೆ ನೀಡಿದ್ದರು. ಆದರೆ ಸ್ಟಾಲಿನ್ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಇದೀಗ ಸೆಂಥಿಲ್ ರಾಜೀನಾಮೆ ನೀಡಿದ ಬಳಿಕ ಫೆ.12ರಂದು ಸೆಂಥಿಲ್ ರಾಜೀನಾಮೆ ಅಂಗೀಕಾರಕ್ಕೆ ರಾಜ್ಯಪಾಲರಿಗೆ ಸ್ಟಾಲಿನ್ ಶಿಫಾರಸು ಮಾಡಿದ್ದಾರೆ. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.ಕರೂರು ಶಾಸಕರಾಗಿರುವ ಸೆಂಥಿಲ್ ಹಿಂದಿನ ಎಐಡಿಎಂಕೆ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕೆ ಲಂಚ ಸ್ವೀಕರಿಸಿದ ಆರೋಪದಡಿ ಕಳೆದ ಜೂನ್‌ನಲ್ಲಿ ಇ.ಡಿ ಅವರನ್ನು ಬಂಧಿಸಿತ್ತು. ಬಳಿಕ ಅವರು ಈ ಸರ್ಕಾರದಲ್ಲಿ ಹೊಂದಿದ್ದ ಖಾತೆಗಳನ್ನು ಇತರರಿಗೆ ಮರುಹಂಚಿಕೆ ಮಾಡಲಾಗಿತ್ತು. ಇನ್ನು ಈವರೆಗೆ ಸೆಂಥಿಲ್ ಸಲ್ಲಿಸಿದ ಎಲ್ಲ ಜಾಮೀನು ಅರ್ಜಿಗಳೂ ವಜಾಗೊಂಡಿವೆ.