ಸಾರಾಂಶ
ನವದೆಹಲಿ: ವಿಮಾನಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬಾಂಬ್ ಬೆದರಿಕೆಯನ್ನೊಡ್ಡುವ ಸರಣಿ ಗುರುವಾರವೂ ಮುಂದುವರೆದಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ 3 ವಿಮಾನ ಸೇರಿ 85 ವಿಮಾನಗಳಿಗೆ ಬೆದರಿಕೆ ಕರೆ ಬಂದಿದೆ.
ಈ ಮೂಲಕ ಕಳೆದ 11 ದಿನಗಳಲ್ಲಿ 250 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಂತಾಗಿದೆ.ಮೂಲ ಪ್ರಕಾರ ಗುರುವಾರ ಏರಿಂಡಿಯಾ, ವಿಸ್ತಾರ, ಇಂಡಿಗೋ, ಆಕಾಸಾ ಸಂಸ್ಥೆಗಳಿಗೆ ಸೇರಿದ 85 ದೇಶೀಯ ಮತ್ತು ಅಂತಾರಾಷ್ಟ್ರೀಯ ಸುಮಾರು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ. ಒಡಿಶಾದ ಭುವನೇಶ್ವರ ಹಾಗೂ ಝರ್ಸುಗುಡಾ ಏರ್‌ಪೋರ್ಟ್‌ಗೂ ಬೆದರಿಗೆ ಬಂದಿದೆ.
ಆದರೆ ತಪಾಸಣೆ ಬಳಿಕ ಎಲ್ಲ ಬೆದರಿಕೆ ಹುಸಿ ಎಂದು ಸಾಬೀತಾಗಿದೆ.ಕಳೆದ 11 ದಿನಗಳಲ್ಲಿ ಈ ರೀತಿಯ 250 ಘಟನೆಗಳು ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ 8 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ, ಪೊಲೀಸ್ ಮೂಲಗಳ ಪ್ರಕಾರ ಈ ಸಂದೇಶಗಳು ಅನಾಮಧೇಯ ಎಕ್ಸ್ ಖಾತೆಗಳಿಂದ ಬಂದಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ಅವನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ ಸಂದೇಶಗಳ ಮೂಲದ ಬಗ್ಗೆ ಮಾಹಿತಿ ನೀಡಲು ಎಕ್ಸ್ ಹಾಗೂ ಫೇಸ್‌ಬುಕ್ ಮಾಲೀಕ ಕಂಪನಿಯಾದ ಮೆಟಾಗೆ ಸೂಚಿಸಲಾಗಿದೆ.
ಗುರುವಾರಕ್ಕೂ ಮುನ್ನ ಸುಮಾರು 170 ವಿಮಾನಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಸಂದೇಶ ಬಂದಿದ್ದವು.ವಿಮಾನಗಳಿಗೆ ಪದೇ ಪದೇ ಬೆದರಿಕೆಯನ್ನು ಹಾಕಿ ಪ್ರಯಾಣಿಕರಿಗೆ ಅನಾನೂಕಲತೆಯನ್ನು ಉಂಟು ಮಾಡುವ ಆರೋಪಿಗಳನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿರುವುದಾಗಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ ನಾಯ್ಡು ಈ ಹಿಂದೆ ಹೇಳಿದ್ದರು.