ಸಾರಾಂಶ
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ, ಒಂದು ಚುನಾವಣೆಗೆ ಕರೆಗೆ ಮಿತ್ರ ಪಕ್ಷಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಯುಸಿಸಿಗೆ ವಿಚಾರದಲ್ಲಿ ಮಿತ್ರಗಳು ಪಕ್ಷಗಳು ದೂರವೇ ಉಳಿದಿದ್ದರೆ, ಒಂದು ದೇಶ, ಒಂದು ಚುನಾವಣೆ ಕಲ್ಪನೆಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ.
ಜೆಡಿಯು ನಾಯಕ ಬಿಹಾರ ಸಿಎಂ ಸಿತೀಶ್ ಕುಮಾರ್ ಈ ವಿಚಾರದಲ್ಲಿ ಭಿನ್ನ ನಿಲುವನ್ನು ಹೊಂದಿದ್ದು ‘ ಸಮಾಲೋಚನೆ ನಡೆಸದೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಸಮಾಜದಲ್ಲಿ ಘರ್ಷಣೆಗೆ ಕಾರಣವಾಗಬಹುದು’ ಎಂದಿದ್ದಾರೆ. ಆದರೆ ನಿತೀಶ್ ಒಂದು ದೇಶ ಒಂದು ಚುನಾವಣೆಗೆ ಬೆಂಬಲ ನೀಡಿದ್ದಾರೆ. ಜೆಡಿಯು ವಕ್ತಾರ ಕೆ.ಸಿ ತ್ಯಾಗಿ, ‘ಧಾರ್ಮಿಕ ಮುಖಂಡರು, ಎಲ್ಲ ಪಾಲುದಾರರೊಂದಿಗೆ ಒಮ್ಮತದೊಂದಿಗೆ ಚರ್ಚಿಸಿದ ಬಳಿಕವೇ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದಿದ್ದಾರೆ.
ಇನ್ನು ತೆಲುಗು ದೇಶಂ ಪಕ್ಷ (ಟಿಡಿಪಿ) ತಮ್ಮ ನಿಲುವನ್ನು ಅಂತಿಮಗೊಳಿಸಲು ಯುಸಿಸಿಗೆ ಸಂಬಂಧಿಸಿದ ಸಂಪೂರ್ಣ ವಿವರಕ್ಕಾಗಿ ಕಾಯುತ್ತಿದ್ದೇವೆ ಎಂದಿದೆ. ಮತ್ತೊಂದೆಡೆ ಲೋಕ ಜನಾಶಕ್ತಿ ಕೂಡ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲವನ್ನು ಸೂಚಿಸಿಲ್ಲ. ಅಲ್ಲದೇ ವೈವಿಧ್ಯತೆಗಳನ್ನು ಹೊಂದಿರುವ ದೇಶವನ್ನು ಒಂದೇ ವೇದಿಕೆಯಡಿ ತರುವುದು ಹೇಗೆ ಎಂದು ಪ್ರಶ್ನಿಸಿದೆ. ಆದರೆ ಮಹಾರಷ್ಟ್ರದಲ್ಲಿ ಶಿವಸೇನೆಯ ಶಿಂಧೆ ಬಣ ಏಕರೂಪ ಸಂಹಿತೆ ಮತ್ತು ಒಂದು ದೇಶ ಒಂದು ಚುನಾವಣೆ ಎರಡಕ್ಕೂ ಬೆಂಬಲ ಸೂಚಿಸಿವೆ.