ಉಜ್ಜಯಿನಿ ಮಹಾಕಾಲ ದೇಗುಲದಲ್ಲಿ ಅಗ್ನಿ ಅವಘಡ: 14 ಅರ್ಚಕರಿಗೆ ಗಾಯ

| Published : Mar 26 2024, 01:00 AM IST / Updated: Mar 26 2024, 09:29 AM IST

ujjaini mahakali temple
ಉಜ್ಜಯಿನಿ ಮಹಾಕಾಲ ದೇಗುಲದಲ್ಲಿ ಅಗ್ನಿ ಅವಘಡ: 14 ಅರ್ಚಕರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಿದ್ಧ ಮಹಾಕಾಲ ದೇಗುಲದ ಗರ್ಭ ಗುಡಿಯಲ್ಲಿ ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ.

ಉಜ್ಜಯಿನಿ (ಮ.ಪ್ರ.): ಇಲ್ಲಿನ ಪ್ರಸಿದ್ಧ ಮಹಾಕಾಲ ದೇಗುಲದ ಗರ್ಭ ಗುಡಿಯಲ್ಲಿ ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. 

ಘಟನೆಯಲ್ಲಿ 14 ಅರ್ಚಕರು ಮತ್ತು ಅವರ ಆಪ್ತರು ಗಾಯಗೊಂಡಿದ್ದು, ಅವರನ್ನೆಲ್ಲಾ ಉಜ್ಜಯಿನಿ ಮತ್ತು ಇಂದೋರ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಮೊದಲಾದವರು ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. 

ಅಲ್ಲದೆ ಗಾಯಾಳುಗಳ ಕುಟುಂಬಕ್ಕೆ ತಲಾ 1 ಲಕ್ಷ ರು. ಪರಿಹಾರವನ್ನೂ ಘೋಷಿಸಲಾಗಿದೆ. ಮತ್ತೊಂದೆಡೆ ಘಟನೆ ಕುರಿತು ತನಿಖೆಗೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಏನಾಯ್ತು?
ಎಂದಿನಂತೆ ಅರ್ಚಕರು ಮತ್ತು ಅವರ ಆಪ್ತರು ಮುಂಜಾನೆ 5.50ರ ವೇಳೆಗೆ ಶಿವನಿಗೆ ಭಸ್ಮಾರತಿ ಮಾಡುತ್ತಿದ್ದರು. ಇದರ ಭಾಗವಾಗಿ ಹೋಳಿ ಹಬ್ಬದ ನಿಮಿತ್ತ ವಿಶೇಷವಾಗಿ ಬಣ್ಣದಿಂದ (ಗುಲಾಲ್‌) ಶಿವನಿಗೆ ಅಭಿಷೇಕ ಮಾಡಲಾಗುತ್ತಿತ್ತು. 

ಈ ವೇಳೆ ಬಣ್ಣವು ಸಮೀಪದಲ್ಲೇ ಇದ್ದ ಆರತಿ ತಟ್ಟೆ ಬಿದ್ದು ಅದರೊಳಗಿದ್ದ ಕರ್ಪೂರಕ್ಕೆ ತಾಗಿ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗರ್ಭಗುಡಿಗೆ ವ್ಯಾಪಿಸಿದ ಕಾರಣ ಅದರೊಳಗಿದ್ದ 14 ಜನರಿಗೆ ಶೇ.35-40ರಷ್ಟು ಸುಟ್ಟಗಾಯಗಳಾಗಿದೆ. 

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಘಟನೆ ನಡೆಯುವಾಗ ಗರ್ಭಗುಡಿಯ ಹೊರಭಾಗದ ನಂದಿ ಹಾಲ್‌ನಲ್ಲಿ ಹಲವು ಗಣ್ಯರು ಸಮೇತ ಸಾಕಷ್ಟು ಭಕ್ತರು ಇದ್ದರಾದರೂ ಅವರಿಗೆ ಏನೂ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಲಾಲ್‌ನಲ್ಲಿನ ಕೆಮಿಕಲ್‌ನಿಂದ ಬೆಂಕಿ?
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮೋಹನ್‌ ಯಾದವ್‌, ಗುಲಾಲ್‌ ಆರತಿತಟ್ಟೆಗೆ ಬಿದ್ದು ಬೆಂಕಿ ಹತ್ತಿಕೊಂಡಿತೋ ಅಥವಾ ಗುಲಾಲ್‌ ಯಾವುದಾದರೂ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ಈ ದುರ್ಘಟನೆ ಸಂಭವಿಸಿತೋ ಗೊತ್ತಿಲ್ಲ. 

ಹೋಳಿ ಬಣ್ಣ ಗರ್ಭಗುಡಿಯ ಗೋಡೆಗೆ ತಾಗದಿರಲಿ ಎಂಬ ಕಾರಣಕ್ಕೆ ಗೋಡೆಗಳನ್ನು ಬಟ್ಟೆಗಳಿಂದ ಮುಚ್ಚಲಾಗಿತ್ತು. ಇದು ಬೆಂಕಿ ವ್ಯಾಪಿಸಲು ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಇನ್ನು ಸಚಿವ ಕೈಲಾಶ್‌ ವಿಜಯವರ್ಗೀಯ ಮಾತನಾಡಿ, ಗುಲಾಲ್‌ನಲ್ಲಿನ ರಾಸಾಯನಿಕದ ಕಾರಣ ಬೆಂಕಿ ಹೊತ್ತಿರಬಹದುಉ ಎಂದು ಅನುಮಾನಿಸಿದ್ದಾರೆ.