ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಕಂದಮ್ಮಗಳ ಸಾವಿಗೆ ಕಾರಣವಾಗಿದ್ದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ್ದ ಶ್ರೀಶನ್ ಫಾರ್ಮಾಸುಟಿಕಲ್ಸ್ ಕಂಪನಿಯ ಮಾಲೀಕ ಜಿ. ರಂಗನಾಥನ್‌ಗೆ ಸೇರಿದ 2.04 ಕೋಟಿ ರು. ಮೌಲ್ಯದ ಚೆನ್ನೈನಲ್ಲಿನ ಅಸ್ತಿಯನ್ನು ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚೆನ್ನೈ: ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಕಂದಮ್ಮಗಳ ಸಾವಿಗೆ ಕಾರಣವಾಗಿದ್ದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ್ದ ಶ್ರೀಶನ್ ಫಾರ್ಮಾಸುಟಿಕಲ್ಸ್ ಕಂಪನಿಯ ಮಾಲೀಕ ಜಿ. ರಂಗನಾಥನ್‌ಗೆ ಸೇರಿದ 2.04 ಕೋಟಿ ರು. ಮೌಲ್ಯದ ಚೆನ್ನೈನಲ್ಲಿನ ಅಸ್ತಿಯನ್ನು ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕೋಲ್ಡ್ರಿಫ್ ದುರಂತಕ್ಕೆ ಸಂಬಂಧಿಸಿದಂತೆ ಆಕ್ಟೋಬರ್‌ನಲ್ಲಿಯೇ ಮಧ್ಯಪ್ರದೇಶ ಪೊಲೀಸರು ರಂಗನಾಥನ್ ಅವರನ್ನು ಬಂಧಿಸಿದ್ದರು. ಇದೀಗ ಇ.ಡಿ. ಅಧಿಕಾರಿಗಳು, ಶ್ರೀಶನ್ ಕಂಪನಿಯು ಲಾಭ ಹೆಚ್ಚಳಕ್ಕೆ ಅಕ್ರಮ ರೀತಿಯಲ್ಲಿ ವ್ಯವಹಾರ ಮಾಡಿರುವ ಕೇಸು ದಾಖಲಿಸಿಕೊಂಡು 2.04 ಕೋಟಿ ರು. ಮೌಲ್ಯದ ಎರಡು ಫ್ಲ್ಯಾಟ್ ಜಪ್ತಿ ಮಾಡಿದ್ದಾರೆ.
ಇನ್ನು ಮಧ್ಯಪ್ರದೇಶ ಮತ್ತು ತಮಿಳುನಾಡು ಪೊಲೀಸರು ದಾಖಲಿಸಿರುವ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಇ.ಡಿ. ಶ್ರೀಶನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ.
ಸಿಗರೇಟ್ ಮೇಲೆ ಅಬಕಾರಿ ಸುಂಕ: ಮಸೂದೆ ಪಾಸ್
ಪಿಟಿಐ ನವದೆಹಲಿಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸುವ 2 ಮಸೂದೆಗಳನ್ನು ಲೋಕಸಭೆ ಬುಧವಾರ ಪಾಸು ಮಾಡಿದೆ.
ಆದರೆ ಇದರಿಂದ ಬೆಲೆ ಏರಿಕೆ ಆಗುವ ಸಾಧ್ಯತೆ ಇಲ್ಲ. ಏಕೆಂದರೆ ‘ಪಾಪ ಸರಕುಗಳು’ (ಸಿನ್ ಗೂಡ್ಸ್) ಎಂದು ಕರೆಸಿಕೊಳ್ಳುವ ಇವುಗಳ ಮೇಲಿನ ಜಿಎಸ್ಟಿ ಪರಿಹಾರ ಸೆಸ್ ವಿಧಿಸುವಿಕೆ ಈಗ ಅಂತ್ಯಗೊಳ್ಳುತ್ತಿದೆ. ಇದರಿಂದ ಇವುಗಳ ಬೆಲೆ ತನ್ನಿಂತಾನೇ ಇಳಿಯುವ ಸಾಧ್ಯತೆ ಇರುವ ಕಾರಣ, ಇದನ್ನು ತಪ್ಪಿಸಿ ಸರಿದೂಗಿಸಲು ಹೊಸ ಸುಂಕ ಹಾಗೂ ಸೆಸ್ ವಿಧಿಸಲಾಗುತ್ತದೆ.ಈ ನಡುವೆ, ಇದರಿಂದ ಸಂಗ್ರಹವಾಗುವ ಅಬಕಾರಿ ಸುಂಕವನ್ನು ರಾಜ್ಯಗಳ ಜತೆ ಹಂಚಿಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇನ್ನು 10 ಗ್ರಾಂ ಕೆಳಗಿನ ಪಾನ್ ಮಸಾಲಾ ಪ್ಯಾಕೆಟ್‌ಗೂ ಬೆಲೆ ಮುದ್ರಣ ಕಡ್ಡಾಯ
ನವದೆಹಲಿ: ಪಾನ್ ಮಸಾಲಾ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಯು 10 ಗ್ರಾಂಗಿಂತಲೂ ಕೆಳಗಿನ ತೂಕದ ಪಾನ್ ಮಸಾಲಾ ಪ್ಯಾಕೆಟ್ ಮೇಲೆ ಬೆಲೆ ಮುದ್ರಣ ಕಡ್ಡಾಯಗೊಳಿಸಿದೆ.ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ಹೊರಡಿಸಿರುವ ಆದೇಶವು ಮುಂದಿನ ವರ್ಷ ಫೆ.1ರಿಂದ ಜಾರಿಯಾಗಲಿದೆ.
ಇಷ್ಟು ದಿನ ಕೇವಲ 10 ಗ್ರಾಂಗಿಂತ ಮೇಲ್ಪಟ್ಟ ಪ್ಯಾಕೆಟ್‌ಗಳ ಮೇಲೆ ಬೆಲೆ ಇರುತ್ತಿತ್ತು. ಈಗ ಎಲ್ಲ ಮಾದರಿ ಪ್ಯಾಕೆಟ್‌ಗಳಲ್ಲಿಯೂ ಕಡ್ಡಾಯ ಮಾಡಿದ್ದು ಇದರಿಂದ ಗ್ರಾಹಕರಿಗೆ ಹೊರೆ ತಪ್ಪಿಸಬಹುದಾಗಿದೆ ಎಂದು ಇಲಾಖೆ ಹೇಳಿದೆ. ಜೊತೆಗೆ ಪ್ರತಿ ಪ್ಯಾಕೆಟ್ ಮೇಲೂ ಜಿಎಸ್ಟಿ ಸಂಗ್ರಹಿಸಲು ಕೇಂದ್ರಕ್ಕೆ ಸುಲಭವಾಗಲಿದೆ.
ಭಾರತ ತುಂಡು ತುಂಡಾಗಬೇಕು: ಬಾಂಗ್ಲಾ ಮಾಜಿ ಸೇನಾ ಜನರಲ್
ಢಾಕಾ: ಭಾರತದ ವಿರುದ್ಧ ಬಾಂಗ್ಲಾ ನಾಯಕರ ಹಗೆತನದ ಹೇಳಿಕೆ ಮುಂದುವರೆದಿದೆ. ‘ಬಾಂಗ್ಲಾ ಶಾಂತಿ ಕದಡುವುದಕ್ಕೆ ಭಾರತವೇ ಕಾರಣ. ಮತ್ತೆ ಶಾಂತಿ ನೆಲೆಸಬೇಕಾದರೆ ಭಾರತವನ್ನು ತುಂಡು ತುಂಡಾಗಿ ಕತ್ತರಿಸಬೇಕು’ ಎಂದು ಬ್ರಿಗೇಡಿಯರ್ ಜನರಲ್ (ನಿವೃತ್ತ) ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಭಾರತವು ತುಂಡು ತುಂಡಾಗಿ ಒಡೆಯುವ ತನಕ ಬಾಂಗ್ಲಾದೇಶದಲ್ಲಿ ಪೂರ್ಣ ಪ್ರಮಾಣದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಆ ದೇಶ ಯಾವಾಗಲೂ ಬಾಂಗ್ಲಾದಲ್ಲಿ ಅಶಾಂತಿಯನ್ನು ಜೀವಂತವಾಗಿರಿಸುತ್ತದೆ’ ಎಂದರು.ಅಜ್ಮಿ ಅವರು ಜಮಾತ್ - ಇ- ಇಸ್ಲಾಮಿ ಮುಖ್ಯಸ್ಥ ಮತ್ತು 1971ರ ವಿಮೋಚನಾ ಯುದ್ಧದಲ್ಲಿ ಹಿಂದೂಗಳು ಮತ್ತು ವಿಮೋಚನಾ ಪರ ಬಂಗಾಳಿಗಳ ನರಮೇಧಕ್ಕೆ ಕಾರಣವಾದ ಗುಲಾಮ್ ಅಜಮ್ ಅವರ ಪುತ್ರ.
ಶಬರಿಮಲೆ: ಪಿಕ್‌ಪಾಕೆಟ್ ತಡೆಗೆ ವಿಶೇಷ ಪೊಲೀಸ್ ತಂಡ ನಿಯೋಜನೆ
ಪಟ್ಟಣಂತಿಟ್ಟ (ಕೇರಳ): ಇಲ್ಲಿ ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆ 1 ಲಕ್ಷ ದಾಟಿದ್ದು, ಕ್ಷೇತ್ರದಲ್ಲಿ ಪಿಕ್‌ಪಾಕೆಟ್‌ನಂಥ ಕೃತ್ಯ ಹೆಚ್ಚುತ್ತಿವೆ. ಇದನ್ನು ತಡೆಯಲು ರಾಜ್ಯ ಸರ್ಕಾರ ವಿಶೇಷ ಪೊಲೀಸ್ ತಂಡ ರಚಿಸಿದೆ.ಯಾತ್ರೆಯ ಋತು ಆರಂಭದ ನಡುವೆ ಕಳ್ಳತನ, ಹಲ್ಲೆ, ವಾಗ್ವಾದಗಳಂತಹ 40ಕ್ಕೂ ಹೆಚ್ಚು ಕೃತ್ಯಗಳು ವರದಿಯಾಗಿವೆ. ಇವುಗಳ ತಡೆಗೆ ಕ್ರಮ ಕೈಗೊಂಡಿದ್ದು ಕ್ಷೇತ್ರದಲ್ಲಿ ಪೊಲೀಸರು ತೀವ್ರ ನಿಗಾ ವಹಿಸಲಿದ್ದಾರೆ ಎಂದು ಕೇರಳ ಸರ್ಕಾರ ಬುಧವಾರ ಹೇಳಿದೆ.
ಜನದಟ್ಟಣೆ ಹೆಚ್ಚಳದಿಂದ ಪಂಪಾ ಸರೋವರ, ಸನ್ನಿಧಾನದಲ್ಲಿ ಕಿಸೆಗಳ್ಳತನ ಪ್ರಕರಣಗಳು ಕಂಡು ಬಂದಿವೆ. ಈ ಬಗ್ಗೆ ಭಕ್ತರು ಎಚ್ಚರವಾಗಿರಬೇಕೆಂದು ಅಧಿಕಾರಿಗಳು ಕೋರಿದ್ದಾರೆ.
