ಸಾರಾಂಶ
ನವದೆಹಲಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವೆ ಆತಿಶಿ ನೇತೃತ್ವದ ಸಚಿವ ಸಂಪುಟದಲ್ಲಿ ಆಪ್ ಶಾಸಕ ಮುಖೇಶ್ ಅಹ್ಲಾವತ್ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಜತೆಗೆ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಸಚಿವ ಸಂಪುಟದಲ್ಲಿದ್ದ ನಾಲ್ವರು ಸಚಿವರನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
ಅತಿಶಿ ಅವರ ಶಪಥ ದಿನವೇ ಇವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಗೋಪಾಲ್ ರಾಯ್, ಸೌರಭ್ ಭಾರದ್ವಾಜ್, ಕೈಲಾಶ್ ಗೆಹ್ಲೋತ್ ಮತ್ತು ಇಮ್ರಾನ್ ಹುಸೇನ್ ಅವರನ್ನು ಸಂಪುಟದಲ್ಲಿ ಮುಂದುವರೆಸಲಾಗುವುದು. ದೆಹಲಿ ಸಂಪುಟಕ್ಕೆ 10 ಜನರ ನೇಮಕಕ್ಕೆ ಅವಕಾಶ ಇದ್ದರೂ ಆಪ್ ಸಿಎಂ ಸೇರಿ 6 ಜನರನ್ನು ಮಾತ್ರ ನೇಮಿಸಿದೆ.
ಅಮೆರಿಕದಲ್ಲಿ ಬಡ್ಡಿದರ ಇಳಿಕೆ; ಸೆನ್ಸೆಕ್ಸ್ 83184ರಲ್ಲಿ ಅಂತ್ಯ; ಸಾರ್ವಕಾಲಿಕ ಗರಿಷ್ಠ ಅಂಕ
ಮುಂಬೈ: ಅಮೆರಿಕದ ಕೇಂದ್ರೀಯ ಬ್ಯಾಂಕ್ ಬುಧವಾರ ಸಾಲದ ಮೇಲಿನ ಬಡ್ಡಿದರವನ್ನು ಶೇ.0.5ರಷ್ಟು ಇಳಿಸಿದ ಸುದ್ದಿ ಗುರುವಾರ ಭಾರತೀಯ ಷೇರುಪೇಟೆಯಲ್ಲಿ ಉತ್ತಮ ಏರಿಕೆ ಕಾರಣವಾಗಿದೆ. ಸೆನ್ಸೆಕ್ಸ್ ಒಂದು ಹಂತದಲ್ಲಿ 825 ಅಂಕಗಳ ಏರಿಕೆ ಕಂಡಿತ್ತಾದರೂ ದಿನದಂತ್ಯಕ್ಕೆ 236 ಅಂಕಗಳ ಏರಿಕೆಯೊಂದಿಗೆ 83184ರಲ್ಲಿ ಮುಕ್ತಾಯವಾಯಿತು. ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಮುಕ್ತಾಯವಾಗಿದೆ.
ಇನ್ನೊಂದೆಡೆ ನಿಫ್ಟಿ 28 ಅಂಕ ಏರಿ 25415ರಲ್ಲಿ ಮುಕ್ತಾಯವಾಯಿತು. ಮಧ್ಯಂತರದಲ್ಲಿ ನಿಫ್ಟಿ 234 ಅಂಕಗಳೊಂದಿಗೆ 256111 ಅಂಕ ತಲುಪಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು. ಗುರುವಾರ ಬ್ಯಾಂಕಿಂಗ್ ವಲಯದ ಷೇರುಗಳು ಉತ್ತಮ ಏರಿಕೆ ಕಂಡವು. ವಿಶ್ವದ ಇತರೆ ಷೇರುಪೇಟೆಗಳು ಕೂಡಾ ಗುರುವಾರ ಏರುಗತಿಯಲ್ಲಿತ್ತು.
ವಿಶ್ವದ ಉತ್ತಮ ಶಾಲೆ ಪ್ರಶಸ್ತಿ ರೇಸ್‌ನಲ್ಲಿ ಭಾರತದ 2 ಶಾಲೆಗಳು
ಲಂಡನ್: ಆ್ಯಕ್ಸೆಂಚರ್, ಲೆಮನ್ ಫೌಂಡೇಷನ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಜಂಟಿಯಾಗಿ ನೀಡುವ ವಿಶ್ವದ ಅತ್ಯಂತ ಉತ್ತಮ ಶಾಲೆ ಪುರಸ್ಕಾರ ರೇಸ್‌ನಲ್ಲಿ ಭಾರತದ 2 ಶಾಲೆಗಳು ಸೇರಿವೆ.
ಈ ಎರಡೂ ಶಾಲೆಗಳು 2 ವಿಭಾಗಗಳಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಇವುಗಳು ಆಯಾ ವಿಭಾಗಗಳಲ್ಲಿ ಟಾಪ್-3ರಲ್ಲಿ ಸ್ಥಾನ ಪಡೆದುಕೊಂಡಿದೆ. ಒಂದು ವೇಳೆ ಗೆದ್ದರೆ, ಶಾಲೆಗಳಿಗೆ 10,000 ಡಾಲರ್ (8.36 ಲಕ್ಷ ರು.) ಬಹುಮಾನ ದೊರೆಯಲಿದೆ. ದೆಹಲಿಯ ರೈನ್ ಇಂಟರ್‌ನ್ಯಾಷನಲ್ ಸ್ಕೂಲ್ ‘ಪರಿಸರ ಜಾಗೃತಿ’ ವಿಭಾಗದಲ್ಲಿ ಮತ್ತು ಮಧ್ಯಪ್ರದೇಶದ ರತ್ಲಾಂನ ಸಿಎಂ ರೈಸ್ ಸ್ಕೂಲ್ ‘ನಾವೀನ್ಯತೆ’ ವಿಭಾಗಗಳಲ್ಲಿ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿವೆ. ಇವು ವಿಶ್ವದ ಇನ್ನಿತರ ಶಾಲೆಗಳೊಂದಿಗೆ ಸೆಣಸಲಿವೆ.
ಭಾರತದ ಶಸ್ತ್ರಾಸ್ತ್ರ ಉಕ್ರೇನ್‌ಗೆ ಪೂರೈಕೆ
ನವದೆಹಲಿ: ಭಾರತದ ಖಾಸಗಿ ಕಂಪನಿಗಳು ಉತ್ಪಾದಿಸುತ್ತಿರುವ ಫಿರಂಗಿ ಶೆಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಉಕ್ರೇನ್‌ಗೆ ಪೂರೈಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲವಾಗಿ ನಿಂತಿರುವ ಯುರೋಪಿಯನ್ ದೇಶಗಳು, ತಾವು ಖರೀದಿಸಿದ ಶಸ್ತ್ರಾಸ್ತ್ರಗಳನ್ನು ನೆರವಿನ ರೂಪದಲ್ಲಿ ಉಕ್ರೇನ್‌ಗೆ ನೀಡುತ್ತಿವೆ ಎನ್ನಲಾಗಿದೆ.
ತನ್ನ ವಿರೋಧದ ಹೊರತಾಗಿಯೂ ಭಾರತದಲ್ಲಿ ಉತ್ಪಾದಿತ ಶಸ್ತ್ರಾಸ್ತ್ರಗಳು ತನ್ನ ಶತ್ರು ದೇಶದ ಕೈ ಸೇರುತ್ತಿರುವುದಕ್ಕೆ ರಷ್ಯಾ ಸಿಡಿಮಿಡಿಗೊಂಡಿದೆ ಎನ್ನಲಾಗಿದೆ.ಭಾರತ, ದಶಕಗಳಿಂದಲೂ ರಷ್ಯಾದಿಂದ ಯುದ್ಧ ವಿಮಾನ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿ ಮಾಡುತ್ತಿದೆ. ಹೀಗಿರುವಾಗ ಭಾರತದಲ್ಲಿ ಉತ್ಪಾದಿತ ಅಸ್ತ್ರಗಳು ತನ್ನ ವಿರುದ್ಧ ಬಳಕೆಯಾಗುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಈ ನಡುವೆ, ಶಸ್ತ್ರಾಸ್ತ್ರ ಸರಬರಾಜು ವರದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದ್ದು, ಇದೊಂದು ಅಸಮರ್ಪಕ ವರದಿ ಎಂದಿದೆ. ‘ರಾಯಿಟರ್ಸ್ ವರದಿಯನ್ನು ಗಮನಿಸಿದ್ದೇವೆ. ಇದು ಊಹಾಪೋಹಾ ಮತ್ತು ತಪ್ಪು ದಾರಿಗೆಳೆಯುವಂತಿದೆ. ಇದರಲ್ಲಿ ನಿಖರತೆ ಇಲ್ಲ’ ಎಂದು ವಿದೇಶಾಂಗ ಇಲಾಖೆ ಹೇಳಿದೆ.