1000 ಕೋಟಿ ರು. ಮೌಲ್ಯದ ಐಷಾರಾಮಿ ವಿಮಾನ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ

| Published : Sep 20 2024, 01:39 AM IST / Updated: Sep 20 2024, 05:25 AM IST

ಸಾರಾಂಶ

ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರು ಬೋಯಿಂಗ್ 737 MAX 9 ಅನ್ನು ಸುಮಾರು 1000 ಕೋಟಿ ರೂಪಾಯಿಗಳಿಗೆ ಖರೀದಿಸುವ ಮೂಲಕ ಭಾರತದಲ್ಲಿ ಈ ರೀತಿಯ ವಿಮಾನವನ್ನು ಹೊಂದಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.  

ನವದೆಹಲಿ: ಇತ್ತೀಚೆಗಷ್ಟೇ ಪುತ್ರ ಅನಂತ್‌ ಮದುವೆಯನ್ನು ಸಾವಿರಾರು ಕೋಟಿ ರು.ವೆಚ್ಚದಲ್ಲಿ ಇಡೀಗ ಜಗತ್ತಿನ ಗಮನ ಸೆಳೆದಿದ್ದ ಭಾರತದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ಮುಕೇಶ್‌ ಅಂಬಾನಿ, ಇದೀಗ ಅಂದಾಜು 1000 ಕೋಟಿ ರು. ಮೊತ್ತದಲ್ಲಿ ಐಷಾರಾಮಿ ವಿಮಾನವೊಂದನ್ನು ಖರೀದಿಸಿದ್ದಾರೆ.

ಅಮೆರಿಕದ ಬೋಯಿಂಗ್‌ ಕಂಪನಿಯ ಅತ್ಯಾಧುನಿಕ, ಐಷಾರಾಮಿ ಸೌಲಭ್ಯ ಒಳಗೊಂಡ 737 ಮ್ಯಾಕ್ಸ್‌ 9 ವಿಮಾನ ಇತ್ತೀಚೆಗೆ ಮುಂಬೈಗೆ ಬಂದಿಳಿದಿದೆ. ಈ ಮೂಲಕ ಇಂಥ ವಿಮಾನ ಖರೀದಿಸಿದ ಭಾರತದ ಮೊದಲ ಖಾಸಗಿ ವ್ಯಕ್ತಿ ಎಂಬ ಹಿರಿಮೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮಾಲೀಕರಿಗೆ ಒಲಿದಿದೆ.

ವಿಮಾನದಲ್ಲಿ ಸೌಲಭ್ಯ:

737 ಮ್ಯಾಕ್ಸ್‌ 9, ಬೋಯಿಂಗ್‌ನ ಅತ್ಯಾಧುನಿಕ ವಿಮಾನ. ಒಮ್ಮೆ ಇಂಧನ ಭರ್ತಿ ಮಾಡಿದರೆ ತಡೆರಹಿತವಾಗಿ 11700 ಕಿ.ಮೀ ದೂರ ಪ್ರಯಾಣಿಸಬಲ್ಲದು. ಸಾಮಾನ್ಯವಾಗಿ ಇದರಲ್ಲಿ 180-200 ಜನರು ಪ್ರಯಾಣಿಸಬಹುದಾದರೂ, ಈ ವಿಮಾನವನ್ನು ಅಂಬಾನಿ ಕುಟುಂಬದ ಬೇಡಿಕೆ ಅನ್ವಯ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಗಿಂತ ಕುಟುಂಬದ ಬೇಡಿಕೆಗೆ ಅನುಗುಣವಾಗಿ ವಿಮಾನದ ಒಳಗೆ ರೂಪಾಂತರ ಮಾಡಲಾಗಿದೆ. ಈ ವಿಮಾನವನ್ನು ಅಂಬಾನಿ ಕುಟುಂಬ ದೂರ ಪ್ರಯಾಣಕ್ಕೆ ಬಳಸಲು ಉದ್ದೇಶಿಸಿದೆ ಎನ್ನಲಾಗಿದೆ.

10ನೇ ವಿಮಾನ:

ಬಿ 737 ಮ್ಯಾಕ್ಸ್‌ 9 ರ್ಪಡೆಯಿಂದ ಅಂಬಾನಿ ಕುಟುಂಬದ ಖಾಸಗಿ ವಿಮಾನಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇವರ ಬಳಿ ಏರ್ಬಸ್‌ 319 ಎಸಿಜೆ, 2 ಬೊಂಬಾರ್ಡೇರ್‌ ಗ್ಲೋಬಲ್ 5000, 2 ಡಸ್ಸಾಲ್ಟ್‌ ಫಾಲ್ಕನ್‌ 900, 1 ಬೊಂಬಾರ್ಡೇರ್‌ ಗ್ಲೋಬಲ್‌ 6000, 1 ಎಂಬ್ರೇಯರ್‌ ಇಆರ್‌ಜಿ 135 ವಿಮಾನಗಳನ್ನು ಹೊಂದಿದ್ದಾರೆ. ಜೊತೆಗೆ ಡಾಲ್ಫಿನ್‌ ಸಿಕೋರ್ಸ್ಕಿ ಎಸ್‌ 76 ಹೆಲಿಕಾಪ್ಟರ್‌ಗಳನ್ನು ಅಂಬಾನಿ ಕುಟುಂಬ ಹೊಂದಿದೆ.