ಸಾರಾಂಶ
ನವದೆಹಲಿ: 9.50 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಸತತ ನಾಲ್ಕನೇ ವರ್ಷವೂ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಸಂಬಳ ತೆಗೆದುಕೊಂಡಿಲ್ಲ.
2008-09ರ ಆರ್ಥಿಕ ವರ್ಷದಲ್ಲಿ 15 ಕೋಟಿ ರು. ಸಂಭಾವನೆ ಪಡೆಯುತ್ತಿದ್ದ ಅಂಬಾನಿ, 2019ರ ಕೋವಿಡ್ ಕಾಲದಲ್ಲಿ ಸಂಬಳ ಪಡೆಯುವುದನ್ನು ನಿಲ್ಲಿಸಿದ್ದರು ಹಾಗೂ ಕಂಪನಿ ಮತ್ತೆ ಮೊದಲಿನಂತೆ ಸಂಪಾದಿಲು ಪ್ರಾರಂಭಿಸುವ ತನಕ ಹೀಗೇ ಮುಂದುವರೆಯಲು ನಿರ್ಧರಿಸಿದ್ದರು. ಅಂಬಾನಿ ಮತ್ತು ಅವರ ಪರಿವಾರದ ರಕ್ಷಣೆಗೆ ತಗಲುವ ಖರ್ಚನ್ನು ಕಂಪನಿಯೇ ನೋಡಿಕೊಳ್ಳುತ್ತದೆ. ಆದರೆ ವ್ಯಾವಹಾರಿಕ ಪ್ರಯಾಣ, ವಸತಿ, ಸಂವಹನೆ ಸೇರಿದಂತೆ ಕೆಲ ವೆಚ್ಚಗಳನ್ನು ಅಗತ್ಯತೆಗಳೆಂದು ಪರಿಗಣಿಸದೆ ಮರುಪಾವತಿಸಲಾಗುವುದು ಎಂದು ಹೇಳಲಾಗಿದೆ.
ಸೆನ್ಸೆಕ್ಸ್ 875 ಅಂಕ ಏರಿಕೆ: ಹೂಡಿಕೆದಾರರಿಗೆ 9 ಲಕ್ಷ ಕೋಟಿ ರುಪಾಯಿ ಲಾಭ
ಮುಂಬೈ: ಸತತ ಮೂರು ದಿನಗಳ ಇಳಿಕೆ ಹಾದಿಯಿಂದ ಹೊರಬಂದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 875 ಅಂಕಗಳ ಏರಿಕೆ ಕಂಡು 79468 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 304 ಅಂಕ ಏರಿಕೆ ಕಂಡು 24337 ಅಂಕಗಳಲ್ಲಿ ಮುಕ್ತಾಯವಾಗಿದೆ. ಬುಧವಾರ ಷೇರುಪೇಟೆಯಲ್ಲಿ ನೊಂದಾಯಿತ ಕಂಪನಿಗಳ ಪೈಕಿ 2985 ಕಂಪನಿಗಳ ಷೇರು ಬೆಲೆ ಏರಿಕೆಯಾದರೆ, 948 ಇಳಿಕೆ ಕಂಡವು. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 8.97 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ. ಕಳೆದ 3 ದಿನದಲ್ಲಿ ಸೆನ್ಸೆಕ್ಸ್ 3275 ಅಂಕ ಕುಸಿದಿತ್ತು.
ರಾಹುಲ್ ಸೇರಿ 7 ವಿಪಕ್ಷ ನಾಯಕರಿಗೆ ಪಾಕ್‌ನಿಂದ ಮಾವಿನಹಣ್ಣು ಗಿಫ್ಟ್!
ನವದೆಹಲಿ: ಇಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಏಳು ವಿಪಕ್ಷ ನಾಯಕರಿಗೆ ಮಾವಿನ ಹಣ್ಣಿನ ಪೆಟ್ಟಿಗೆ ಕಳುಹಿಸಿಕೊಟ್ಟಿದೆ. ರಾಜತಾಂತ್ರಿಕತೆಯ ಭಾಗವಾಗಿ ರಾಹುಲ್ ಗಾಂಧಿ, ರಾಜ್ಯಸಭೆ ಸಂಸದ ಕಪಿಲ್ ಸಿಬಲ್, ಶಶಿ ತರೂರ್, ಮೊಹಿಬ್ಬುಲ್ಲಾ ನದ್ವಿ, ಜಿಯಾ ಉರ್ ರೆಹಮಾನ್ ಬಾರ್ಕ್, ಅಫ್ಜಲ್ ಅನ್ಸಾರಿ ಮತ್ತು ಇಕ್ರಾ ಹಸನ್‌ಗೆ ಮಾವಿನ ಹಣ್ಣುಗಳನ್ನು ಕಳುಹಿಸಲಾಗಿದೆ.
ಈ ಮೊದಲು ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಕೂಡ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಮಾಜಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಾವನ್ನು ಕಳುಹಿಸುತ್ತಿದ್ದರು.
ಸೆ.3ಕ್ಕೆ ರಾಜ್ಯಸಭೆಯ 12 ಸ್ಥಾನಗಳಿಗೆ ಚುನಾವಣೆ
ನವದೆಹಲಿ: ರಾಜ್ಯಸಭೆಯ 12 ಸ್ಥಾನಗಳಿಗೆ ಸೆ.3ರಂದು ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಸುರ್ಬಾನಂದ್ ಸೋನವಾಲ್ , ಜೋತಿರಾಧಿತ್ಯ ಸಿಂಧಿಯಾ ಸೇರಿದಂತೆ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಲೋಕಸಭೆಗೆ ಆಯ್ಕೆಗೊಂಡಿರುವ 10 ಮಂದಿ ಸಂಸದರಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇದರ ಜೊತೆಗೆ ಕೆ. ಕೇಶವ್ ರಾವ್ ಮತ್ತು ಮಮತಾ ಮೊಹಂತಾ ರಾಜೀನಾಮೆ ತೆರವಾಗಿರುವ ಸ್ಥಾನಗಳಿಗೂ ತೆಲಂಗಾಣ ಮತ್ತು ಒಡಿಶಾ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಆಗಸ್ಟ್ 14ರಂದು ರಾಜ್ಯಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಕೆಗೆ ಆ.21 ಕೊನೆಯ ದಿನ. ಸೆ.3ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರ ಬೀಳಲಿದೆ
ಹಮಾಸ್ ಮುಖ್ಯಸ್ಥನಾಗಿ ಯಾಹ್ಯಾ ಸಿನ್ವಾರ್ ಆಯ್ಕೆ
ಜೆರುಸಲೇಂ: 1200ಕ್ಕೂ ಹೆಚ್ಚು ಜನರ ಬಲಿ ಪಡೆದ ಕಳೆದ ಅ.7 ಇಸ್ರೇಲ್ ಮೇಲಿನ ದಾಳಿಯ ಸೂತ್ರಧಾರಿಯೆಂದು ಗುರುತಿಸಲಾಗುವ ಯಾಹ್ಯಾ ಸಿನ್ವಾರ್‌ನನ್ನು ಹಮಾಸ್ ತನ್ನ ಮುಖ್ಯಸ್ಥನಾಗಿ ಆಯ್ಕೆ ಮಾಡಿದೆ. ಜು. 31ರಂದು ಹತ್ಯೆಯಾದ ಇಸ್ಮಾಯಿಲ್ ಹನಿಯೇ ಜಾಗಕ್ಕೆ ಸಿನ್ವಾರ್‌ನನ್ನು ನೇಮಿಸಲಾಗಿದೆ.