ಸಾರಾಂಶ
ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿರುವ ಮುಂಬೈನಲ್ಲಿ ವಿದ್ಯುತ್ ಕಡಿತವಾದ ಪರಿಣಾಮ, ಮೋನೋ ರೈಲೊಂದು ಹಳಿಯ ಮೇಲೆಯೇ 3 ತಾಸು ನಿಂತು ಆತಂಕ ಸೃಷ್ಟಿಯಾದ ಘಟನೆ ಮಂಗಳವಾರ ಸಂಜೆ 6:15ರ ಸುಮಾರಿಗೆ ನಡೆದಿದೆ. 3 ತಾಸುಗಳ ನಿರಂತರ ಪ್ರಯತ್ನದಿಂದ ಅದರ ಕಿಟಕಿಯ ಗಾಜನ್ನು ಒಡೆದು 497 ಜನರನ್ನು ರಕ್ಷಿಸಲಾಗಿದೆ.
ತಾಂತ್ರಿಕ ದೋಷದಿಂದ ಭಾರೀ ಆತಂಕ । ಕಿಟಕಿ ಗಾಜು ಒಡೆದು ಜನರ ರಕ್ಷಣೆ
ಮುಂಬೈ: ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿರುವ ಮುಂಬೈನಲ್ಲಿ ವಿದ್ಯುತ್ ಕಡಿತವಾದ ಪರಿಣಾಮ, ಮೋನೋ ರೈಲೊಂದು ಹಳಿಯ ಮೇಲೆಯೇ 3 ತಾಸು ನಿಂತು ಆತಂಕ ಸೃಷ್ಟಿಯಾದ ಘಟನೆ ಮಂಗಳವಾರ ಸಂಜೆ 6:15ರ ಸುಮಾರಿಗೆ ನಡೆದಿದೆ. 3 ತಾಸುಗಳ ನಿರಂತರ ಪ್ರಯತ್ನದಿಂದ ಅದರ ಕಿಟಕಿಯ ಗಾಜನ್ನು ಒಡೆದು 497 ಜನರನ್ನು ರಕ್ಷಿಸಲಾಗಿದೆ.ಮೈಸೂರ್ ಕಾಲೋನಿ ಎಂಬಲ್ಲಿ ತಿರುವಿನಲ್ಲಿ ನಿಂತುಬಿಟ್ಟ ಈ 4 ಕೋಚ್‌ನ ರೈಲಿನಲ್ಲಿ ಒಟ್ಟು 500 ಜನರಿದ್ದರು. ಮೊದಲು ಆ ರೈಲನ್ನು ಎಳೆದೊಯ್ಯುವ ಯತ್ನ ನಡೆಸಲಾಯಿತಾದರೂ, ಬ್ರೇಕ್‌ಗಳು ಜಾಮ್ ಆಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ವಿದ್ಯುತ್ ಸಂಪರ್ಕ್ ಕಡಿತಗೊಂಡಿದ್ದರಿಂದ ಅದರ ಬಾಗಿಲುಗಳನ್ನು ತೆರೆಯುವುದೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ವಾಹನಗಳಲ್ಲಿ ಅಳವಡಿಸಿರುವ ಎಲಿವೇಟರ್ ಸಹಾಯದಿಂದ ರಕ್ಷಣಾ ತಂಡವು ಹಳಿಯ ಎತ್ತರಕ್ಕೆ ತಲುಪಿ, ಕಿಟಕಿಯ ಗಾಜನ್ನು ಒಡೆದು, ಜನರನ್ನು ಕೆಳಗೆ ಕರೆತಂದಿದ್ದಾರೆ. ಬಳಿಕ ಅವರನ್ನೆಲ್ಲಾ 4 ಬಸ್ಸುಗಳಲ್ಲಿ ಮನೆಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಡಿಸಿಎಂ ಏಕನಾಥ್ ಶಿಂಧೆ ಮಾತನಾಡಿದ್ದು, ‘ಹಾರ್ಬರ್ ಮಾರ್ಗ ಮುಚ್ಚಲಾಗಿದ್ದ ಕಾರಣ ಜನರೆಲ್ಲಾ ಮೊನೋ ರೈಲಲ್ಲಿ ಪ್ರಯಾಣಿಸುತ್ತಿದ್ದರು. ಇದರಿಂದ ರೈಲಿಗೆ ಹೊರೆ ಹೆಚ್ಚಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ವೈದ್ಯಕೀಯ ತಂಡವೂ ಹಾಜರಿದೆ’ ಎಂದರು.