ಮುಂಬೈ: 2ನೇ ದಿನ 6 ತಾಸಲ್ಲಿ 20 ಸೆಂ.ಮೀ ಮಳೆ

| Published : Aug 20 2025, 01:30 AM IST

ಸಾರಾಂಶ

ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ 2ನೇ ದಿನವೂ ಮುಂದುವರೆದಿದ್ದು, ಮಂಗಳವಾರ ಕೇವಲ 6 ತಾಸಿನಲ್ಲಿ 20 ಸೆಂ.ಮೀ. ಮಳೆಯಾಗಿದೆ.

- ಭಾರಿ ಮಳೆಗೆ ಮುಂಬೈ ಜೀವನಾಡಿ ಮಿಥಿ ನದಿಯಲ್ಲಿ ಪ್ರವಾಹ

- ವಾಹನ, ವಿಮಾನ, ರೈಲು ಸಂಚಾರ, ಜನಜೀವನ ಅಸ್ತವ್ಯಸ್ತ

ಮುಂಬೈ: ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ 2ನೇ ದಿನವೂ ಮುಂದುವರೆದಿದ್ದು, ಮಂಗಳವಾರ ಕೇವಲ 6 ತಾಸಿನಲ್ಲಿ 20 ಸೆಂ.ಮೀ. ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ಮುಂಬೈನ ಜೀವನಾಡಿ ಮಿಥಿ ನದಿಯು ಅಪಾಯ ಮಟ್ಟಕ್ಕಿಂತ ಮೇಲೆ 4 ಮೀಟರ್‌ ಹರಿಯುತ್ತಿದ್ದು, ಆಸುಪಾಸಿನಲ್ಲಿರುವ ಪ್ರದೇಶಗಳು ಜಲಾವೃತಗೊಂಡಿವೆ. ನದಿಯಿಂದಾಗಿ ಥಾಣೆ- ಸಿಎಸ್‌ಎಂಟಿ ನಿಲ್ದಾಣ ನಡುವಿನ ರೈಲು ಮಾರ್ಗ ಜಲಾವೃತಗೊಂಡಿದ್ದು, ಹೀಗಾಗಿ ಮುಂಬೈಗೆ ರೈಲು ಸಂಪರ್ಕ ಕಡಿತವಾಗಿದೆ. ಭಾರಿ ಮಳೆಯಿಂದಾಗಿ ಗೋಚರತೆ ಕಡಿಮೆಯಾಗಿ ಕನಿಷ್ಠ 8 ವಿಮಾನಗಳು ಮಾರ್ಗ ಬದಲಿಸಿದ್ದು, ಹಲವು ವಿಮಾನಗಳ ಸಂಚಾರ ವ್ಯತ್ಯಯವಾಗಿವೆ. ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ನದಿ ಬದಿಯಲ್ಲಿ ನೆಲೆಸಿದ್ದ 500 ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಾಂಬೆ ಹೈಕೋರ್ಟ್‌ ಮಧ್ಯಾಹ್ನ 12,30ರವರೆಗೆ ಮಾತ್ರ ಕಾರ್ಯನಿರ್ವಹಿಸಿದೆ. ಹವಾಮಾನ ಇಲಾಖೆಯು ಕೊಂಕಣ್ ಕರಾವಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ.

ರಾಷ್ಟ್ರಪತಿ ಭವನದಿಂದ

₹10000ರ ನೋಟು, 2

ಬದಿಯ ಗಡಿಯಾರ ಹರಾಜು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಹಿಂದಿನ ರಾಷ್ಟ್ರಪತಿಗಳಿಗೆ ಉಡುಗೊರೆಗಳಾಗಿ ಬಂದ 250ಕ್ಕೂ ಹೆಚ್ಚು ವಸ್ತುಗಳನ್ನು ರಾಷ್ಟ್ರಪತಿ ಭವನದಿಂದ ಹರಾಜಿಗೆ ಇಡಲಾಗಿದೆ. ಇವುಗಳಲ್ಲಿ 10,000 ರು. ಮೌಲ್ಯದ ನೋಟು ಮತ್ತು 2 ಬದಿಯ ವಿಂಟೇಜ್ ಗಡಿಯಾರ ಸೇರಿವೆ.2015ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ 10,000 ರು. ಮುಖಬೆಲೆಯ ನೋಟು ಉಡುಗೊರೆಯಾಗಿ ಬಂದಿತ್ತು. ಇದರ ಮೇಲೆ ಕಿಂಗ್ ಜಾರ್ಜ್‌-6 ಚಿತ್ರವಿದೆ. ಇದನ್ನು 1935ರಲ್ಲಿ ಬಿಡುಗಡೆ ಮಾಡಲಾಗಿತ್ತು. ಸ್ವಾತಂತ್ರ್ಯಾನಂತರ 1950ರಲ್ಲಿ ಅಶೋಕ ಸ್ತಂಭದ ಚಿತ್ರದೊಂದಿಗೆ ಪುನಃ ಬಿಡುಗಡೆ ಮಾಡಲಾಯಿತು. ಕಂದು ಮತ್ತು ಹಸಿರು ಬಣ್ಣದಲ್ಲಿರುವ ಈ ನೋಟು SPECIMEN ಎಂಬ ಪದವನ್ನು ಮತ್ತು 000000 ಸರಣಿ ಸಂಖ್ಯೆಯನ್ನು ಹೊಂದಿದೆ.

ಅದೇ ರೀತಿ, 2015ರಲ್ಲಿ ಮುಖರ್ಜಿಯವರಿಗೆ ಉಡುಗೊರೆ ಬಂದ 2 ಬದಿಯ ವಿಂಟೇಜ್ ಗಡಿಯಾರವನ್ನು ಹರಾಜಿಗೆ ಇಡಲಾಗಿದೆ. ಇದು 1747ರ ವಿಕ್ಟೋರಿಯಾ ಸ್ಟೇಷನ್ ಗಡಿಯಾರದ ಮಾದರಿಯಲ್ಲಿದೆ. ರೈಲ್ವೆ ನಿಲ್ದಾಣಗಳಲ್ಲಿರುವ ಗಡಿಯಾರಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ರೋಮನ್ ಅಂಕಿಗಳು ಹಾಗೂ ಲೋಹದ ಕವಚವನ್ನು ಒಳಗೊಂಡಿದೆ.ಅಸ್ಸಾಂ ರೈಫಲ್ ಸೈನಿಕರನ್ನು ಪ್ರತಿಬಿಂಬಿಸುವ ಧಾಯಿ ಮೂರ್ತಿ, ಅಂಗವಸ್ತ್ರಗಳು, ಸ್ಮರಣಿಕೆಗಳು ಸೇರಿ 250ಕ್ಕೂ ಹೆಚ್ಚು ವಸ್ತುಗಳನ್ನು ಹರಾಜಿಗೆ ಇಡಲಾಗಿದೆ. ಇ-ಉಪಹಾರ್ ಎಂಬ ಆನ್ಲೈನ್ ವೇದಿಕೆಯಲ್ಲಿ ಹರಾಜು ನಡೆಯುತ್ತಿದೆ. ಹರಾಜು ಪ್ರಕ್ರಿಯೆ ಆ.1ರಿಂದ ಆರಂಭವಾಗಿದ್ದು, ಆ.31ರವರೆಗೂ ನಡೆಯಲಿದೆ. ಆಸಕ್ತರು https://upahaar.rashtrapatibhavan.gov.in/ ಅನ್ನು ಸಂಪರ್ಕಿಸಿ, ಹರಾಜಿನಲ್ಲಿ ಭಾಗವಹಿಸಬಹುದು.