ಸಾರಾಂಶ
ನಟ ಸಲ್ಮಾನ್ ಖಾನ್ ಅವರಿಗೆ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಕೊಲೆ ಬೆದರಿಕೆ ಬಂದಿದ್ದು, ‘ಶತ್ರುತ್ವ ಕೊನೆಗಾಣಿಸಬೇಕು ಎಂದರೆ 5 ಕೋಟಿ ರು. ಕೊಡು. ಇಲ್ಲದಿದ್ದರೆ ನಿನ್ನ ಸ್ಥಿತಿ ಬಾಬಾ ಸಿದ್ದಿಕಿಗಿಂತ ಕೆಟ್ಟದಾಗಿರಲಿದೆ’ ಎಂದು ಎಚ್ಚರಿಸಲಾಗಿದೆ.
ಮುಂಬೈ: ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಅವರಿಗೆ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಕೊಲೆ ಬೆದರಿಕೆ ಬಂದಿದ್ದು, ‘ಶತ್ರುತ್ವ ಕೊನೆಗಾಣಿಸಬೇಕು ಎಂದರೆ 5 ಕೋಟಿ ರು. ಕೊಡು. ಇಲ್ಲದಿದ್ದರೆ ನಿನ್ನ ಸ್ಥಿತಿ ಬಾಬಾ ಸಿದ್ದಿಕಿಗಿಂತ ಕೆಟ್ಟದಾಗಿರಲಿದೆ’ ಎಂದು ಎಚ್ಚರಿಸಲಾಗಿದೆ.
ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಯ ವಾಟ್ಸಾಪ್‌ಗೆ ಈ ಬೆದರಿಕೆ ಸಂದೇಶ ಬಂದಿದೆ.ಇದರ ಬೆನ್ನಲ್ಲೇ ಸಂದೇಶ ಕಳಿಸಿದವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಹಾಗೂ ಸಲ್ಮಾನ್ ಮನೆ ಸುತ್ತ ಭದ್ರತೆ ಹೆಚ್ಚಿಸಿದ್ದಾರೆ.
ಈ ಹಿಂದೆಯೂ ಬಿಷ್ಣೋಯಿ ಗ್ಯಾಂಗ್, ಸಲ್ಮಾನ್‌ಗೆ ಬೆದರಿಕೆ ಹಾಕಿತ್ತು ಹಾಗೂ ಹತ್ಯೆ ಯತ್ನ ಕೂಡ ನಡೆಸಿತ್ತು.ಇದರ ನಡುವೆ ‘ಈ ಸಂದೇಶವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಲ್ಮಾನ್ ಖಾನ್ ಬದುಕಿ ಉಳಿಯಬೇಕಾದರೆ ಲಾರೆನ್ಸ್ ಬಿಷ್ಣೋಯಿ ವಿರುದ್ಧದ ದ್ವೇಷ ಕೊನೆಗಾಣಿಸಬೇಕು ಹಾಗೂ ₹5 ಕೋಟಿ ನೀಡಬೇಕು. ಹಣ ನೀಡದಿದ್ದರೆ ಬಾಬಾ ಸಿದ್ದಿಕಿಗಿಂತ ಆತನ ಸ್ಥಿತಿ ಕೆಟ್ಟದಾಗುತ್ತದೆ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.
ಸಲ್ಮಾನ್ ಜತೆಗಿನ ಸ್ನೇಹ ವಿರೋಧಿಸಿ ಬಾಬಾ ಸಿದ್ದಿಕಿ ಹತ್ಯೆ ಮಾಡಿದ್ದಾಗಿ ಇತ್ತೀಚೆಗೆ ಬಿಷ್ಣೋಯಿ ಗ್ಯಾಂಗ್ ಹೇಳಿತ್ತು. ರಾಜಸ್ಥಾನದ ಬಿಷ್ಣೋಯಿ ಸಮುದಾಯಕ್ಕೆ ಕೃಷ್ಣಮೃಗ ದೇವರ ಸಮಾನ. ಹೀಗಾಗಿ ಅದನ್ನು ಬೇಟೆ ಆಡಿದ್ದ ಸಲ್ಮಾನ್ ಖಾನ್ ವಿರುದ್ಧ ಬಿಷ್ಣೋಯಿ ಗ್ಯಾಂಗ್ ಕತ್ತಿ ಮಸೆಯುತ್ತಿದೆ.