ಬೆಳಗಾವಿ ಮೂಲದ ಜೈನಮುನಿ ಛತ್ತೀಸ್‌ಗಢದಲ್ಲಿ ದೇಹತ್ಯಾಗ

| Published : Feb 19 2024, 01:31 AM IST / Updated: Feb 19 2024, 11:35 AM IST

Jain Muni

ಸಾರಾಂಶ

ಸಲ್ಲೇಖನ ವ್ರತ ಕೈಗೊಂಡಿದ್ದ ಕರ್ನಾಟಕದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್‌ ಅವರು ಛತ್ತೀಸ್‌ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಭಾನುವಾರ ಸಮಾಧಿಸ್ಥಿತಿ ತಲುಪಿದರು.

ರಾಜನಂದ್‌ಗಾಂವ್‌ (ಛತ್ತೀಸ್‌ಗಢ): ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸಮುದಾಯದ ದಾರ್ಶನಿಕ, ಕರ್ನಾಟಕದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್‌ ಅವರು ಛತ್ತೀಸ್‌ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಭಾನುವಾರ ಸಮಾಧಿಸ್ಥಿತಿ ತಲುಪಿದರು. 

ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ವಿದ್ಯಾಸಾಗರ ಮಹಾರಾಜ್‌ ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು, 3 ದಿನಗಳ ಹಿಂದೆ ಸಲ್ಲೇಖನ ವ್ರತವನ್ನು ಕೈಗೊಂಡಿದ್ದರು. 

ಈ ವ್ರತದ ಪ್ರಕಾರ ಸಂಪೂರ್ಣವಾಗಿ ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸಿದ್ದ ಮುನಿಗಳು ಶನಿವಾರ ತಡರಾತ್ರಿ 2.35ರ ಸುಮಾರಿಗೆ ದೇಹತ್ಯಾಗ ಮಾಡಿದರು. ಚಂದ್ರಗಿರಿ ತೀರ್ಥದಲ್ಲಿ ಕಳೆದ 6 ತಿಂಗಳಿನಿಂದ ಆಚಾರ್ಯರು ನೆಲೆಸಿದ್ದರು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಆಚಾರ್ಯದ ನಿಧನದ ಬಳಿಕ ಛತ್ತೀಸ್‌ಗಢ ಸರ್ಕಾರ ಅರ್ಧದಿನದ ಶೋಕಾಚರಣೆಯನ್ನು ಘೋಷಣೆ ಮಾಡಿತ್ತು. ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. 

ಬಳಿಕ ಮೆರವಣಿಗೆ ನಡೆಸಿ, ಸಾಯಂಕಾಲ ಚಂದ್ರಗಿರಿ ತೀರ್ಥದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನಿ ಮೋದಿ ಸಂತಾಪ:ಆಚಾರ್ಯರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. 

‘ನನ್ನ ಆಲೋಚನೆ ಮತ್ತು ಪ್ರಾರ್ಥನೆ ಆಚಾರ್ಯ 108 ವಿದ್ಯಾಸಾಗರ ಮಹಾರಾಜರ ಅಸಂಖ್ಯಾತ ಭಕ್ತರ ಜೊತೆ ಇದೆ. ಸಮಾಜಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ, ಆಧ್ಯಾತ್ಮಿಕ ಜಾಗೃತಿಗಾಗಿ ಅವರು ನಡೆಸಿದ ಪ್ರಯತ್ನಕ್ಕಾಗಿ, ಬಡತನ ನಿರ್ಮೂಲನೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅವರು ಮಾಡಿದ ಕೆಲಸಗಳಿಗಾಗಿ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ. 

ವರ್ಷಗಳ ಕೆಳಗೆ ಅವರ ಆಶೀರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿತ್ತು. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಏನಿದು ಸಲ್ಲೇಖನ ವ್ರತ?

ಜೈನ ಧರ್ಮದ ಪ್ರಕಾರ ಸಲ್ಲೇಖನ ಎಂಬುದು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ತೆಗೆದುಕೊಳ್ಳುವ ಪ್ರತಿಜ್ಞೆಯಾಗಿದೆ. ಸಾವಿನ ತನಕ ಆಹಾರ, ನೀರು ಸೇವನೆ ಮಾಡದೇ ಉಪವಾಸವಿದ್ದು, ಪ್ರಾಣ ಬಿಡುವುದು ಈ ಪ್ರತಿಜ್ಞೆಯ ಪ್ರಕ್ರಿಯೆಯಾಗಿದೆ.

ಚಿಕ್ಕೋಡಿ ಮೂಲದ ಸ್ವಾಮೀಜಿಆಚಾರ್ಯ ವಿದ್ಯಾಸಾಗರ ಮಹಾರಾಜ್‌ ಅವರು 1946ರ ಅ.10ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ಜನಿಸಿದರು. 

ಚಿಕ್ಕ ವಯಸ್ಸಿನಲ್ಲೇ ಅಧ್ಯಾತ್ಮದತ್ತ ಆಕರ್ಷಿತರಾದ ಇವರು, 22ನೇ ವಯಸ್ಸಿನಲ್ಲಿ ದಿಗಂಬರ ಮುನಿಯಾಗಿ ಸನ್ಯಾಸ ಜೀವನ ಆರಂಭಿಸಿದರು. 1972ರಲ್ಲಿ ಆಚಾರ್ಯ ಪದವಿಗೇರಿದ ಇವರು, ಸಂಸ್ಕೃತ, ಪ್ರಾಕೃತ ಮತ್ತು ಇತರ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. 

ಸಂಸ್ಕೃತದಲ್ಲಿ ಹಲವು ಕೃತಿಗಳನ್ನು ಸಹ ಇವರು ರಚನೆ ಮಾಡಿದ್ದಾರೆ. ಆಚಾರ್ಯ ವಿದ್ಯಾಸಾಗರರ ಮೂವರು ಸೋದರರು, ಇಬ್ಬರು ಸೋದರಿಯರು ಮತ್ತು ಸ್ವತಃ ಇವರ ತಂದೆ-ತಾಯಿಗಳು ಕೂಡಾ ಇವರಿಂದ ದೀಕ್ಷೆ ಪಡೆದಿದ್ದರು.