ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಹೀನಾಯ ಸೋಲಿನ ಬೆನ್ನಲ್ಲೇ ಅಘಾಡಿ ಕೂಟದಲ್ಲಿ ಮಹಾ ಬಿರುಕು

| Published : Nov 28 2024, 12:31 AM IST / Updated: Nov 28 2024, 05:41 AM IST

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್‌ ಅಘಾಡಿ ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ.

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್‌ ಅಘಾಡಿ ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ.

ಇದಕ್ಕೆ ಪೂರಕವೆಂಬಂತೆ ಶಿವಸೇನೆ (ಯುಟಿಬಿ) ನಾಯಕ ಅಂಬಾದಾಸ್‌ ದಾನ್ವೆ, ‘ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಹಲವು ಕಾರ್ಯಕರ್ತರು ಬಯಸುತ್ತಿದ್ದಾರೆ. ಅಧಿಕಾರ ಸಿಗದಿದ್ದರೂ ಅಡ್ಡಿಲ್ಲ, ಪಕ್ಷ ಅನ್ಯರ ವಶವಾಗಲು ಹುಟ್ಟಿಕೊಂಡದ್ದಲ್ಲ. ಇದಕ್ಕೆ ತನ್ನದೇ ಆದ ಸಿದ್ಧಾಂತಗಳಿವೆ’ ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಕೂಡ ಸಾಮ್ಯ ಹೇಳಿಕೆ ನೀಡಿದೆ. ಹಿರಿಯ ಕಾಂಗ್ರೆಸ್‌ ನಾಯಕ ವಿಜಯ್‌ ವಡೆಟ್ಟಿವಾರ್‌ ಮಾತನಾಡಿ, ‘ಕಾಂಗ್ರೆಸ್‌ನಲ್ಲೂ ಇಂತಹ ಅಭಿಪ್ರಾಯಗಳೇ ವ್ಯಕ್ತವಾಗುತ್ತಿವೆ. ಆದರೆ ಅದು ಪಕ್ಷದ ಅಭಿಪ್ರಾಯವಾಗಲಾರದು. ನಾವು ಫಲಿತಾಂಶ ಹಾಗೂ ಸೋಲಿನ ಕಾರಣ ವಿಶ್ಲೇಷಿಸುತ್ತಿದ್ದೇವೆ’ ಎಂದಿದ್ದಾರೆ.

288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್‌, ಶಿವಸೇನೆ(ಉದ್ಧವ್‌ ಬಣ), ಎನ್‌ಸಿಪಿ(ಶರದ್‌ ಬಣ) ಒಳಗೊಂಡ ಅಘಾಡಿ ಕೂಟ ಕೇವಲ 46 ಸ್ಥಾನಗಳನ್ನಷ್ಟೇ ಗಳಿಸಿದೆ.

ಮಹಾಯುತಿ ಗೆಲುವು ಬಂಪರ್‌ ಲಕ್ಕಿ ಡ್ರಾ, ಇವಿಎಂನಿಂದ ಏನು ಬೇಕಾದ್ರೂ ಆಗಬಹುದು: ಸಾಮ್ನಾ

ಮುಂಬೈ: ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಬಂಪರ್‌ ಲಕ್ಕಿ ಡ್ರಾನಲ್ಲಿ ಗೆದ್ದಿದೆ. ದೇಶದ ಜನತೆ ಈ ಗೆಲುವಿನ ಬಗ್ಗೆ ಅಚ್ಚರಿ ಪಡುತ್ತಿದ್ದಾರೆ. ಇವಿಎಂನಿಂದ ಏನು ಬೇಕಾದರೂ ಸಾಧ್ಯ’ ಎಂದು ಶಿವಸೇನೆಯ ಯುಬಿಟಿ ಬಣದ ಮುಖವಾಣಿ ಸಾಮ್ನಾ ಫಲಿತಾಂಶದ ಬಗ್ಗೆ ವ್ಯಂಗ್ಯವಾಡಿದೆ. ‘ಆಡಳಿತಾರೂಢ ಮಹಾಯುತಿ 288 ಸ್ಥಾನಗಳ ಪೈಕಿ 230 ಸ್ಥಾನಗಳಲ್ಲಿ ಈ ಬಂಪರ್ ಲಕ್ಕಿ ಡ್ರಾ ಹೇಗೆ ಗೆದ್ದರು ಎನ್ನುವುದಕ್ಕೆ ಉತ್ತರ ಹುಡುಕುತ್ತಿರುವಾಗ ಅದು ಇವಿಎಂಗಳನ್ನು ತೋರಿಸುತ್ತದೆ. 

ಗುಜರಾತ್, ರಾಜಸ್ಥಾನ ನಂಟಿನ ಇವಿಎಂಗಳನ್ನು ಮಹಾರಾಷ್ಟ್ರದಲ್ಲೂ ಬಳಸಲಾಗಿದೆ. 95 ಕ್ಷೇತ್ರಗಳಲ್ಲಿ ಇವಿಎಂ ಮತ್ತು ಎಣಿಸಿದ ಮತಗಳಿಗೆ ತಾಳೆಯಾಗಲಿಲ್ಲ. ಮತಯಂತ್ರಗಳಲ್ಲಿ ಬಳಸಲಾದ ಬ್ಯಾಟರಿಗಳು ಮತ್ತು ಇತರ ಹಲವು ವಿಷಯಗಳು ಇವಿಎಂ ಹಗರಣದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದೆ. ಮಹಾಯುತಿ ಒಕ್ಕೂಟಕ್ಕೆ ಇಷ್ಟೊಂದು ಮತಗಳು ಹೇಗೆ ಬಂತು ಎಂದು ದೇಶದ ಜನರು ಆಶ್ಚರ್ಯ ಪಡುತ್ತಿದ್ದಾರೆ’ ಎಂದು ಸಾಮ್ನಾ ಹೇಳಿದೆ.