ಸಾರಾಂಶ
ದೆಹಲಿಯ ಕರ್ತವ್ಯ ಪಥ್ ನ ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಮೃತವಾಟಿಕ ಮತ್ತು ಅಜಾದಿ ಕಾ ಅಮೃತ ಮಹೋತ್ಸವ ಸ್ಮಾರಕ ನಿರ್ಮಾಣಕ್ಕಾಗಿ ದೇಶದ ಪ್ರತಿ ಮನೆಯಿಂದ ಅಮೃತ ಕಳಸದಲ್ಲಿ ಮಣ್ಣು ಮತ್ತು ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹನೂರು: ದೆಹಲಿಯ ಕರ್ತವ್ಯ ಪಥ್ ನ ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಮೃತವಾಟಿಕ ಮತ್ತು ಅಜಾದಿ ಕಾ ಅಮೃತ ಮಹೋತ್ಸವ ಸ್ಮಾರಕ ನಿರ್ಮಾಣಕ್ಕಾಗಿ ದೇಶದ ಪ್ರತಿ ಮನೆಯಿಂದ ಅಮೃತ ಕಳಸದಲ್ಲಿ ಮಣ್ಣು ಮತ್ತು ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದ್ದು, ನಮ್ಮ ಹನೂರು ತಾಲೂಕು ಸೇರಿದಂತೆ ದೇಶದ ಪ್ರತಿ ಹಳ್ಳಿಗಳಿಂದ ಮಣ್ಣು ಸಂಗ್ರಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು .
ಜಿಲ್ಲಾ ಪಂಚಾಯತಿ ಚಾಮರಾಜನಗರ, ತಾಲೂಕು ಪಂಚಾಯತಿ ಹನೂರು, ನೆಹರು ಯುವ ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ದೇಶದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕಕ್ಕೆ ಮಣ್ಣು ಮತ್ತು ಅಕ್ಕಿ ಸಂಗ್ರಹಿಸುತ್ತಿರುವ ಈ ಅಭಿಯಾನದಲ್ಲಿ ಹನೂರು ತಾಲೂಕಿನ ಜನರಾದ ನಾವೆಲ್ಲರೂ ಭಾಗವಹಿಸುತ್ತಿರುವುದು, ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಸ್ವತಂತ್ರ ಅಮೃತ ಮಹೋತ್ಸವವನ್ನು ನಮ್ಮ ದೇಶದ ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಮತ್ತು ದೇಶದ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು .
ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಕಿರಣ ಪಡನೇಕರ್, ಇಒ ಉಮೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಮಂಜುಳಾ, ಸುದೇಶ್, ಗಿರೀಶ್, ಸಹಾಯಕ ನಿರ್ದೇಶಕ ರವೀಂದ್ರ, ತಾಲೂಕಿನ ಎನ್.ಆರ್.ಎಲ್.ಎಂ ಮಹಿಳಾ ಸಂಘದ ಪ್ರತಿನಿಧಿಗಳು ಭಾಗವಹಿಸಿದರು