ಮೋದಿ ಶಪಥ ಗ್ರಹಣ ವೇಳೆ ನಿಗೂಢ ಪ್ರಾಣಿ ಗೋಚರ!

| Published : Jun 11 2024, 01:30 AM IST / Updated: Jun 11 2024, 10:23 AM IST

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮಂತ್ರಿ ಮಂಡಲ ರಾಷ್ಟ್ರಭವನದ ಅಂಗಳದಲ್ಲಿ ಭಾನುವಾರ ರಾತ್ರಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ನಿಗೂಢ ಪ್ರಾಣಿಯೊಂದು ಅಡ್ಡಾಡಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮಂತ್ರಿ ಮಂಡಲ ರಾಷ್ಟ್ರಭವನದ ಅಂಗಳದಲ್ಲಿ ಭಾನುವಾರ ರಾತ್ರಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ನಿಗೂಢ ಪ್ರಾಣಿಯೊಂದು ಅಡ್ಡಾಡಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಬಿಜೆಪಿಯ ಮಧ್ಯಪ್ರದೇಶ ಸಂಸದ ದುರ್ಗಾ ದಾಸ್‌ ಉಯಿಕೆ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ತಿಳಿಸಲು ಬಂದಾಗ, ಹಿಂಬದಿಯಲ್ಲಿ ನಿಗೂಢ ಪ್ರಾಣಿಯೊಂದು ಹಾದು ಹೋಗುತ್ತದೆ. ಇದು ಚಿರತೆ ಇರಬಹುದು ಎಂಬ ಬಗ್ಗೆ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಯೇ ನಡೆದಿದೆ. ಪ್ರಾಣಿ ಓಡುವ ದೃಶ್ಯಗಳು ವೈರಲ್‌ ಆಗಿವೆ.

ದೇಶ- ವಿದೇಶಗಳ 8000ಕ್ಕೂ ಅಧಿಕ ಗಣ್ಯರು ನೆರೆದಿದ್ದ ಸಮಾರಂಭಕ್ಕೆ ಅತ್ಯಧಿಕ ಬಿಗಿಭದ್ರತೆಯನ್ನು ಒದಗಿಸಲಾಗಿತ್ತು. ಆದಾಗ್ಯೂ ನಿಗೂಢ ಪ್ರಾಣಿಯೊಂದು ಪ್ರತ್ಯಕ್ಷವಾಗಿರುವುದು ಬಗೆಬಗೆಯ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದ ಸಂದರ್ಭದಲ್ಲಿ ಅಡ್ಡಾಡಿರುವುದು ಚಿರತೆ ಅಲ್ಲ ಎಂದು ದೆಹಲಿಯ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಆ ಪ್ರಾಣಿ ನೋಡಲು ನಾಯಿ ಅಥವಾ ಬೆಕ್ಕಿನ ರೀತಿ ಎಂದು ಹೇಳಿದೆ.

330 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿರುವ ರಾಷ್ಟ್ರಪತಿ ಭವನ ಬಯಲು ಪ್ರದೇಶ, ಅರಣ್ಯ, ಉದ್ಯಾನ, ಹಣ್ಣಿನ ಗಿಡಗಳು, ಜಲಮೂಲಗಳನ್ನು ಹೊಂದಿದೆ. ಬಗೆಬಗೆಯ ಸಸ್ಯ ಹಾಗೂ ಪ್ರಾಣ ಸಂಕುಲವನ್ನು ಒಳಗೊಂಡಿದೆ.