ಭಾರತಕ್ಕೆ ಮತ್ತಷ್ಟು ರಕ್ಷಣಾ ಬಲ: 15 ವರ್ಷದ ನೀಲನಕ್ಷೆ ಸಿದ್ಧ

| N/A | Published : Sep 06 2025, 01:01 AM IST

ಸಾರಾಂಶ

1,800 ಮುಖ್ಯ ಯುದ್ಧ ಟ್ಯಾಂಕ್‌ಗಳು, ಮತ್ತೊಂದು ಯುದ್ಧವಿಮಾನ ವಾಹಕ ನೌಕೆ, ಅತ್ಯಾಧುನಿಕ ಹೆಲಿಕಾಪ್ಟರ್‌ಗಳು, ಮಾನವರಹಿತ ಯುದ್ಧವಿಮಾನಗಳು... ಹೀಗೆ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತೀಯ ರಕ್ಷಣಾಪಡೆಗೆ ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಲಿವೆ.

 ನವದೆಹಲಿ: 1,800 ಮುಖ್ಯ ಯುದ್ಧ ಟ್ಯಾಂಕ್‌ಗಳು, ಮತ್ತೊಂದು ಯುದ್ಧವಿಮಾನ ವಾಹಕ ನೌಕೆ, ಅತ್ಯಾಧುನಿಕ ಹೆಲಿಕಾಪ್ಟರ್‌ಗಳು, ಮಾನವರಹಿತ ಯುದ್ಧವಿಮಾನಗಳು... ಹೀಗೆ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತೀಯ ರಕ್ಷಣಾಪಡೆಗೆ ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಲಿವೆ.

‘ಆಪರೇಷನ್‌ ಸಿಂದೂರ ಬಳಿಕ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ ಸ್ವಾತಂತ್ರ್ಯಾನಂತರದ ಅತಿದೊಡ್ಡ ರಕ್ಷಣಾ ಸಾಮರ್ಥ್ಯ ಮೇಲ್ದರ್ಜೆಗೇರಿಸುವ ಯೋಜನೆಗೆ ಕೈಹಾಕಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ನೌಕೆಗಳು, ಡ್ರೋನ್‌ಗಳನ್ನು ಸೇನಾ ಬತ್ತಳಿಕೆಗೆ ಸೇರ್ಪಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಈ ಸಂಬಂಧ ಮುಂದಿನ ತಲೆಮಾರಿನ ಯುದ್ಧದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 15 ವರ್ಷಗಳ ನೀಲನಕ್ಷೆಯನ್ನೂ ಸಿದ್ಧಪಡಿಸಿದೆ’ ಎಂದು ಸರ್ಕಾರದ ನೀಲನಕ್ಷೆ ಇರಿಸಿಕೊಂಡು ಎನ್‌ಡಿಟೀವಿ ವರದಿ ಮಾಡಿದೆ.

ಇನ್ನಷ್ಟು ನ್ಯೂಕ್ಲಿಯರ್‌ ಯುದ್ಧನೌಕೆಗಳು, ಮುಂದಿನ ತಲೆಮಾರಿನ ಯುದ್ಧಟ್ಯಾಂಕ್‌ಗಳು, ಹೈಪರ್‌ಸೋನಿಕ್‌ ಕ್ಷಿಪಣಿಗಳು, ಬಾಂಬರ್‌ ಡ್ರೋನ್‌ಗಳು, ಎಐ ಚಾಲಿತ ಶಸ್ತ್ರಾಸ್ತ್ರಗಳು ಮತ್ತು ಅಂತರಿಕ್ಷ ಆಧಾರಿತ ಯುದ್ಧ ತಂತ್ರಜ್ಞಾನವನ್ನು ಭಾರತದ ರಕ್ಷಣಾಪಡೆಗೆ ಸೇರ್ಪಡೆ ಮಾಡಲು ಸರ್ಕಾರ ಮುಂದಾಗಿದೆ.

ಸೇನೆಗೆ ಏನೇನು?:

ಭಾರತೀಯ ಸೇನೆ ಬಳಸುತ್ತಿರುವ ಹಾಲಿ ಟಿ-72 ಯುದ್ಧಟ್ಯಾಂಕ್‌ಗಳನ್ನು ಬದಲಿಸಿ 1,800 ಭವಿಷ್ಯದ ಯುದ್ಧ ಟ್ಯಾಂಕ್‌ಗಳ ಸೇರ್ಪಡೆ, ಗುಡ್ಡಗಾಡುಗಳಲ್ಲಿ ಬಳಕೆಗೆ ಪೂರಕವಾಗಿ 400 ಕಡಿಮೆ ತೂಕದ ಲೈಟ್‌ ಟ್ಯಾಂಕ್‌ಗಳು, 50 ಸಾವಿರ ಟ್ಯಾಂಕ್‌ ನಿರ್ದೇಶಿತ ಕ್ಷಿಪಣಿಗಳು, 700 ರೋಬೋಟಿಕ್‌ ಕೌಂಟರ್‌-ಐಇಡಿ ವ್ಯವಸ್ಥೆ ಮತ್ತಿತರ ಯುದ್ಧೋಪಕರಣಗಳು.

ನೌಕಾಸೇನೆಗೆ ಏನೇನು?:

ನೂತನ ವಿಮಾನವಾಹಕ ಯುದ್ಧ ನೌಕೆ, ಮುಂದಿನ ತಲೆಮಾರಿನ 10 ಯುದ್ಧನೌಕೆಗಳು, 7 ಅತ್ಯಾಧುನಿಕ ಗಸ್ತು ಸಮರ ನೌಕೆಗಳು, ನಾಲ್ಕು ಲ್ಯಾಂಡಿಂಗ್‌ ಡಾಕ್‌ ಪ್ಲಾಟ್‌ಫಾರ್ಮ್‌ಗಳು, ಯುದ್ಧನೌಕೆಗಳಿಗೆ ನ್ಯೂಕ್ಲಿಯರ್‌ ಪ್ರೊಪಲ್ಷನ್‌ಗಳು, ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಏರ್‌ಕ್ರಾಫ್ಟ್ ಲಾಂಚ್‌ ಸಿಸ್ಟಂಗಳ ಸೇರ್ಪಡೆ.

ವಾಯುಸೇನೆಗೆ ಏನೇನು?:

75 ಹೈ ಆಲ್ಟಿಟ್ಯೂಡ್‌ ಸುಡೋ ಸೆಟ್‌ಲೈಟ್‌ (ಮಾನವರಹಿತ ವೈಮಾನಿಕ ವಾಹನ)ಗಳು, 150 ಬಾಂಬರ್‌ ಡ್ರೋನ್‌ಗಳು, ನೂರಾರು ಗುರಿ ನಿರ್ದೇಶಿತ ಯುದ್ಧ ಸಾಮಗ್ರಿಳು, 100 ದೂರದಿಂದ ನಿಯಂತ್ರಿಸಲ್ಪಡುವ ವಿಮಾನಗಳ ಸೇರ್ಪಡೆ ಉದ್ದೇಶ ಹೊಂದಲಾಗಿದೆ.

ಆಪರೇಷನ್‌ ಸಿಂದೂರ ಬಳಿಕ ಆಧುನಿಕ ಯುದ್ಧ ಕೌಶಲ್ಯಗಳಿಗೆ ಅನುಗುಣವಾಗಿ ಭಾರತೀಯ ಸೇನೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಅಗತ್ಯವನ್ನು ಕೇಂದ್ರ ಸರ್ಕಾರ ಮನಗಂಡಿತ್ತು.

Read more Articles on