ಸಾರಾಂಶ
ನವದೆಹಲಿ: ತಾರಾ ಜೋಡಿಯಾದ ನಾಗಚೈತನ್ಯ ಮತ್ತು ಶೋಭಿತಾ ಧುಲಿಪಾಲಾ ಗುರುವಾರ ಹೈದರಾಬಾದ್‌ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗಚೈತನ್ಯ ತಂದೆ, ತೆಲುಗು ಜನಪ್ರಿಯ ನಟ ನಾಗಾರ್ಜುನ ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಶೋಭಿತಾಳನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಲು ಅತೀವ ಸಂತಸವಾಗಿದೆ. ಗುರುವಾರ ಬೆಳಿಗ್ಗೆ 9.42ಕ್ಕೆ ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಾಗಚೈತನ್ಯ 2017ರಲ್ಲಿ ನಟಿ ಸಮಂತಾ ರುತ್ ಪ್ರಭು ಅವರನ್ನು ವಿವಾಹವಾಗಿದ್ದರು. 2021ರ ಅಕ್ಟೋಬರ್‌ನಲ್ಲಿ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು.
ಪ.ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ನಿಧನ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆ ಸ್ಥಾಪಿಸಿ, ದೊಡ್ಡ ಮಟ್ಟಿಗಿನ ಉದ್ಯಮವನ್ನಾಗಿ ಬೆಳೆಸಿ, ರಾಜ್ಯದ ಆರ್ಥಿಕತೆಯನ್ನು ಗಮನಾರ್ಹ ಬದಲಾವಣೆಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ(80) ಗುರುವಾರ ವಯೋಸಹಜ ಖಾಯಿಲೆಯಿಂದ ನಿಧನರಾದರು. ಮೃತದೇಹವನ್ನು ವೈದ್ಯಕೀಯ ಕಾಲೇಜುಗಳ ಸಂಶೋಧನೆಗೆ ನೀಡಲಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಭಟ್ಟಾಚಾರ್ಯ, ಪತ್ನಿ ಮತ್ತು ಪುತ್ರಿಯನ್ನುಅಗಲಿದ್ದಾರೆ. ಬುದ್ಧದೇವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು ಗಣ್ಯರ ಸಂತಾಪ ಸೂಚಿಸಿದ್ದಾರೆ.
ಬಂಗಾಳ ಅಸ್ಥಿರ ಆರ್ಥಿಕತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಬುದ್ಧದೇವ್ ಕೈಗಾರಿಕೆ ಸ್ಥಾಪನೆಗಳ ಮೂಲಕ ಹೊಸ ರೂಪವನ್ನು ಕೊಟ್ಟವರು. ಅಲ್ಲದೇ ಬಂಗಾಳದಲ್ಲಿ ನಗರಾಭಿವೃದ್ಧಿಗೆ ಬೆಳವಣಿಗೆಗೂ ಶ್ರಮಿಸಿದ್ದರು.1966ರಲ್ಲಿ ಸಿಪಿಎಂ ಸೇರ್ಪಡೆಯಾದ ಬುದ್ಧದೇವ್ 1972ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಸರಳ ಜೀವನಕ್ಕೆ ಹೆಸರಾಗಿದ್ದ ಬುದ್ಧದೇವ್ 2000 ರಿಂದ 2011ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ಕೊಠಡಿಯ ಸರ್ಕಾರಿ ಬಂಗಲೆಯಲ್ಲೇ ವಾಸವಿದ್ದರು.
ಐಎಎಸ್ ಆಕಾಂಕ್ಷಿ ವಿದ್ಯಾರ್ಥಿಗಳ ಸಾವಿಗೆ ಕೋಚಿಂಗ್ ಸೆಂಟರ್ ಮಾಲೀಕ ಹೊಣೆ: ತನಿಖಾ ವರದಿ
ನವದೆಹಲಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಮೂವರು ಐಎಎಸ್ ಆಕಾಂಕ್ಷಿ ವಿದ್ಯಾರ್ಥಿಗಳ ಸಾವಿಗೆ, ಕೋಚಿಂಗ್ ಸೆಂಟರ್‌ನ ಮಾಲೀಕನೇ ಹೊಣೆ ಎಂದು ಜಿಲ್ಲಾಧಿಕಾರಿಗಳ ತನಿಖಾ ವರದಿ ಹೇಳಿದೆ. ‘ಮಾಲೀಕರ ನಿರ್ಲಕ್ಷ್ಯದಿಂದ ಮೂವರು ವಿದ್ಯಾರ್ಥಿಗಳ ಸಾವಾಗಿದೆ. ಕೋಚಿಂಗ್ ಸೆಂಟರ್‌ನಲ್ಲಿ ನಿಯಮಗಳ ಉಲ್ಲಂಘನೆ ಬಗ್ಗೆ ಮುನ್ಸಿಪಾಲ್ ಕಾರ್ಪೋರೆಷನ್ ಮತ್ತು ಅಗ್ನಿಶಾಮಕ ದಳ ನೋಟಿಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನೋಟಿಸ್ ನೀಡಿದ ನಂತರ ನೆಲ ಮಾಳಿಗೆಯನ್ನು ಸೀಲ್ ಮಾಡಲು ವಿಫಲರಾಗಿದ್ದಾರೆ. ಶೋಕಾಸ್ ನೋಟಿಸ್‌ನಲ್ಲಿಯೂ ಈ ಬಗ್ಗೆ ಉಲ್ಲೇಖಗೊಂಡಿಲ್ಲ ದುರ್ನಡೆಯಿಂದ ದುರಂತ ಸಂಭವಿಸಿದೆ’ ಎಂದು ಕಂದಾಯ ಸಚಿವರಿಗೆ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ.
ಕಾಲೇಜಲ್ಲಿ ಹಿಜಾಬ್, ಬುರ್ಖಾ ನಿಷೇಧ: ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ನವದೆಹಲಿ: ಕಾಲೇಜು ಆವರಣದಲ್ಲಿ ಹಿಜಾಬ್ ಮತ್ತು ಬುರ್ಖಾ ನಿಷೇಧಿಸಿ ಮುಂಬೈನ ಕಾಲೇಜು ಹೊರಡಿಸಿದ್ದ ಆದೇಶ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ.
ಪರೀಕ್ಷೆಗಳು ಪ್ರಾರಂಭವಾಗಿರುವ ಕಾರಣ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರಿಂದ ವಿಚಾರಣೆಯನ್ನು ಶೀಘ್ರವಾಗಿ ನಡೆಸುವ ಬಗ್ಗೆ ವಕೀಲರಾದ ಅಭಿಹಾ ಜೈದಿ ಸಲ್ಲಿಸಿದ ಅಹವಾಲನ್ನು ಗುರುವಾರ ಪರಿಗಣಿಸಿದ ನ್ಯಾ। ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಈ ನಿರ್ಧಾರ ತೆಗೆದುಕೊಂಡಿದೆ.ಹಿಜಾಬ್ ಹಾಗೂ ಬುರ್ಖಾ ನಿಷೇಧಿಸುವುದರಿಂದ ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ ಎಂಬ ಎನ್.ಜಿ ಆಚಾರ್ಯ ಮತ್ತು ಡಿ.ಕೆ ಮರಾಠೆ ಕಾಲೆಜಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಜು.26ರಂದು ನಿರಾಕರಿದಿದ್ದ ಹೈ ಕೋರ್ಟ್, ಕಾಲೇಜಿನಲ್ಲಿ ಶಿಸ್ತು ಕಾಪಾಡಲು ವಸ್ತ್ರ ಸಂಹಿತೆ ಅಗತ್ಯವಾಗಿದ್ದು, ಇದನ್ನು ನಿರ್ಧರಿಸುವ ಹಕ್ಕನ್ನು ಶಿಕ್ಷಣ ಸಂಸ್ಥೆಗಳು ಹೊಂದಿದೆ ಎಂದಿತ್ತು.
ಕರ್ನಾಟಕದ ಹಿಜಾಬ್ ಪ್ರಕರಣ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.