ದೇಶದ ನೂರಾರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಒಡ್ಡಿ, ಲಕ್ಷಾಂತರ ವಿಮಾನ ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ್ದ ಹಾಗೂ ವಿಮಾನಯಾನ ಕಂಪನಿಗಳಿಗೆ ನೂರಾರು ಕೋಟಿ ರು. ನಷ್ಟ ಉಂಟು ಮಾಡಿದ್ದ ಮತ್ತು ವಿಮಾನಯಾನ ವಲಯವನ್ನೇ ಏರುಪೇರು ಮಾಡಿದ್ದ ಯುವಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

 ನಾಗಪುರ : ಕಳೆದ 2 ವಾರಗಳ ಅವಧಿಯಲ್ಲಿ ದೇಶದ ನೂರಾರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಒಡ್ಡಿ, ಲಕ್ಷಾಂತರ ವಿಮಾನ ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ್ದ ಹಾಗೂ ವಿಮಾನಯಾನ ಕಂಪನಿಗಳಿಗೆ ನೂರಾರು ಕೋಟಿ ರು. ನಷ್ಟ ಉಂಟು ಮಾಡಿದ್ದ ಮತ್ತು ವಿಮಾನಯಾನ ವಲಯವನ್ನೇ ಏರುಪೇರು ಮಾಡಿದ್ದ ಯುವಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಹಾರಾಷ್ಟ್ರದ ಗೊಂಡಿಯಾ ಮೂಲದ ಜಗದೀಶ್‌ ಉಯಿಕೆ (35) ಬಂಧಿತ. ‘ಟೆರರಿಸಂ’ ಎಂಬ ಪುಸ್ತಕದ ಲೇಖಕನಾಗಿರುವ ಈತ ವಿಮಾನಯಾನ ವಲಯದಲ್ಲಿ ಅಕ್ಷರಶಃ ಭಯೋತ್ಪಾದನೆ ಸೃಷ್ಟಿಸಿದ್ದ. 2021ರಲ್ಲಿ ಬೇರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ನಂತರವೂ ಕುಚೇಷ್ಟೆ ಮುಂದುವರಿಸಿದ್ದ.

ವಿಮಾನಯಾನ ಕಂಪನಿಗಳು ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳಿಗೆ ಹುಸಿ ಬಾಂಬ್‌ ಬೆದರಿಕೆಯ ಇ-ಮೇಲ್‌ ಬಂದು ಆತಂಕ ಹುಟ್ಟಿಸುತ್ತಿದ್ದವು. ಆ ಇ-ಮೇಲ್‌ಗಳ ಬೆನ್ನತ್ತಿ ಹೋದಾಗ ಪೊಲೀಸರಿಗೆ ಅದರ ಹಿಂದೆ ಜಗದೀಶ್‌ ಉಯಿಕೆ ಪಾತ್ರ ಇರುವುದು ಗೊತ್ತಾಗಿದೆ. ಪೊಲೀಸರು ತನ್ನ ಬೆನ್ನು ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ಧಾನೆ.

ವಿಮಾನಯಾನ ಕಂಪನಿಗಳು ಮಾತ್ರವೇ ಅಲ್ಲದೆ ಪ್ರಧಾನಮಂತ್ರಿಗಳ ಕಚೇರಿ, ರೈಲ್ವೆ ಸಚಿವ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿಗಳು, ರೈಲ್ವೆ ಪೊಲೀಸ್‌ ಘಟಕಕ್ಕೂ ಈತ ಬೆದರಿಕೆ ಇ-ಮೇಲ್‌ಗಳನ್ನು ರವಾನಿಸಿದ್ದ ಎನ್ನಲಾಗಿದೆ.