ಸಾರಾಂಶ
ಪಿಟಿಐ
ನವದೆಹಲಿ: ವಿಚಿತ್ರ ನಡವಳಿಕೆಯ ಅಮೆರಿಕ ಉದ್ಯಮಿಯೊಬ್ಬ ಇನ್ಫೋಸಿಸ್ ನಾರಾಯಣಮೂರ್ತಿ ಅವರಿಗೆ ಬಹಳ ಸತಾಯಿಸಿದ್ದ. ಒಮ್ಮೆ ಮೂರ್ತಿ ಅವರು ಅಮೆರಿಕಕ್ಕೆ ತೆರಳಿದ್ದ ವೇಳೆ, ತನ್ನ ಮನೆಯಲ್ಲಿ 4 ಕೋಣೆಗಳು ಇದ್ದರೂ ಕೊಡದೆ ಸ್ಟೋರ್ ರೂಂವೊಂದರ ಪೆಟ್ಟಿಗೆಯ ಮೇಲೆ ಮೂರ್ತಿ ಅವರು ಮಲಗುವಂತೆ ಮಾಡಿದ್ದ. ಸುತ್ತಲೂ ಬಿದ್ದಿದ್ದ ರಟ್ಟಿನ ಪೆಟ್ಟಿಗೆಗಳ ಮಧ್ಯೆ ಇದ್ದ ಪೆಟ್ಟಿಗೆಯ ಮೇಲೆಯೇ ಮೂರ್ತಿ ಮಲಗಿದ್ದರು‘ ಎಂಬ ಕುತೂಹಲಕರ ಸಂಗತಿ ಬಹಿರಂಗವಾಗಿದೆ.
ಭಾರತೀಯ ಮೂಲದ ಅಮೆರಿಕ ಲೇಖಕಿ ಚಿತ್ರ ಬ್ಯಾನರ್ಜಿ ದಿವಕರುಣಿ ಅವರು ಇನ್ಫೋಸಿಸ್ ನಾರಾಯಣಮೂರ್ತಿ ಹಾಗೂ ಅವರ ಪತ್ನಿ ಸುಧಾ ಮೂರ್ತಿ ಅವರ ಆರಂಭಿಕ ಜೀವನದ ಮಾಹಿತಿಯನ್ನು ನೀಡುವ ‘ಆ್ಯನ್ ಅನ್‌ಕಾಮನ್ ಲವ್: ದ ಅರ್ಲಿ ಲೈಫ್ ಆಫ್ ಸುಧಾ ಅಂಡ್ ನಾರಾಯಣಮೂರ್ತಿ’ ಎಂಬ ಪುಸ್ತಕ ರಚಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ.
ನ್ಯೂಯಾರ್ಕ್ ಮೂಲದ ಡೇಟಾ ಬೇಸಿಕ್ಸ್ ಕಾರ್ಪೋರೆಷನ್ ಕಂಪನಿಗೆ ಡಾನ್ ಲೈಲ್ಸ್ ಮುಖ್ಯಸ್ಥರಾಗಿದ್ದರು. ಮೂರ್ತಿ ಅವರ ಬಗ್ಗೆ ಡಾನ್ ವಿಚಿತ್ರ ನಡವಳಿಕೆ ತೋರುತ್ತಿದ್ದರು. ಇನ್ಫೋಸಿಸ್‌ನಿಂದ ಸೇವೆ ಪಡೆದರೂ ಬಿಲ್ ಪಾವತಿಸಲು ಸತಾಯಿಸುತ್ತಿದ್ದರು.
ಅಮೆರಿಕಕ್ಕೆ ಮೂರ್ತಿ ಹಾಗೂ ಅವರ ಇನ್ಫೋಸಿಸ್ ಉದ್ಯೋಗಿಗಳು ತೆರಳಿದಾಗ ಕೋಣೆ ಕಾದಿರಿಸಲು ಬೇಕಾದ ಅನುಮತಿಯನ್ನು ಸಕಾಲಕ್ಕೆ ನೀಡುತ್ತಿರಲಿಲ್ಲ ಎಂದು ಪುಸ್ತಕ ವಿವರಿಸಿದೆ.ಒಮ್ಮೆ ಮೂರ್ತಿ ಅವರು ಕಾರ್ಯನಿಮಿತ್ತ ಅಮೆರಿಕಕ್ಕೆ ತೆರಳಿದ್ದರು.
ಆ ವೇಳೆ ಡಾನ್ ಅವರು ಸ್ಟೋರ್ ರೂಂನಲ್ಲಿ ಸುತ್ತಲೂ ರಟ್ಟುಗಳು ಬಿದ್ದಿದ್ದ ಪೆಟ್ಟಿಗೆಯ ಮೇಲೊಂದರ ಮೇಲೆ ಮೂರ್ತಿ ಮಲಗುವಂತೆ ಮಾಡಿದ್ದರು. ಅವರ ಮನೆಯಲ್ಲಿ 4 ಕೋಣೆ ಇದ್ದರೂ ಕೊಟ್ಟಿರಲಿಲ್ಲ. ಈ ಘಟನೆಯಿಂದ ಮೂರ್ತಿ ಅವರಿಗೆ ಆಘಾತ ತಂದಿತ್ತು. ಇದನ್ನು ಪತ್ನಿಗೂ ತಿಳಿಸಿದ್ದರು ಎಂದು ಪುಸ್ತಕ ಹೇಳುತ್ತದೆ.