ಪರಸ್ಪರ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಮಗ ಟ್ರಂಪ್‌, ಮಿಗ ಮೋದಿ ಮೆಗಾ ಡೀಲ್‌

| N/A | Published : Feb 15 2025, 12:33 AM IST / Updated: Feb 15 2025, 04:22 AM IST

ಸಾರಾಂಶ

ಪರಸ್ಪರ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಮುಂದಾಗಿರುವ ಭಾರತ ಮತ್ತು ಅಮೆರಿಕ, ವ್ಯಾಪಾರ, ವಾಣಿಜ್ಯ, ರಕ್ಷಣಾ ವಲಯದಲ್ಲಿ ಹಲವು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿವೆ.

ವಾಷಿಂಗ್ಟನ್‌: ಪರಸ್ಪರ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಮುಂದಾಗಿರುವ ಭಾರತ ಮತ್ತು ಅಮೆರಿಕ, ವ್ಯಾಪಾರ, ವಾಣಿಜ್ಯ, ರಕ್ಷಣಾ ವಲಯದಲ್ಲಿ ಹಲವು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಭಾರತೀಯ ಕಾಲಮಾನ ಶುಕ್ರವಾರ ಬೆಳಗ್ಗೆ ನಡೆದ ಮಾತುಕತೆ ವೇಳೆ ಉಭಯ ನಾಯಕರು ಹಲವು ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದಾರೆ.

ಇದರಲ್ಲಿ 2030 ವೇಳೆಗೆ ಉಭಯ ದೇಶಗಳ ವಾರ್ಷಿಕ ವಹಿವಾಟು 500 ಶತಕೋಟಿ ಡಾಲರ್‌ಗೆ ಏರಿಸುವ, ಭಾರತಕ್ಕೆ ಎಫ್‌ 35 ವಿಮಾನ, ಜಾವೆಲಿನ್‌ ಕ್ಷಿಪಣಿ ವ್ಯವಸ್ಥೆ ಪೂರೈಕೆ ಸೇರಿದಂತೆ ಹಲವು ಅಂಶಗಳು ಸೇರಿವೆವ್ಯಾಪಾರ: 2030ರ ವೇಳೆಗೆ ಭಾರತ-ಅಮೆರಿಕ ನಡುವಿನ ವ್ಯಾಪಾರ ವಹಿವಾಟನ್ನು 500 ಶತಕೋಟಿ ಡಾಲರ್‌ಗೆ (ಅಂದಾಜು 40 ಲಕ್ಷ ಕೋಟಿ ರು.) ದ್ವಿಗುಣಗೊಳಿಸಲು ಉಭಯ ದೇಶಗಳು ಸಮ್ಮತಿಸಿವೆ. ಸುಲಭವಾಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ನಡೆಸುವಂತಾಗಲು ನಿಯಮಗಳ ಸರಳೀಕರಣ, ವ್ಯಾಪಾರ ಸಂಬಂಧ ವೃದ್ಧಿಗೆ ಪ್ರತಿನಿಧಿಗಳ ನೇಮಕ. ವ್ಯಾಪಾರದ ಮೂಲಕ ಉದ್ಯೋಗ ಸೃಷ್ಟಿ, ಇತ್ಯಾದಿ ಗುರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ, ಭಾರತಕ್ಕೆ ಅಮೆರಿಕ ಭಾರಿ ಪ್ರಮಾಣದ ತೈಲ ಹಾಗೂ ನೈಸರ್ಗಿಕ ಅನಿಲ ಪೂರೈಸಲಿದೆ.

2023ರಲ್ಲಿ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ 190 ಶತಕೋಟಿ ಡಾಲರ್‌ ಇತ್ತು,ರಕ್ಷಣಾ ಸಹಕಾರ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ವಿಶ್ವದ ಅತಿ ಶಕ್ತಿಶಾಲಿ ಯುದ್ಧವಿಮಾನ ಎಫ್‌-35 ಅನ್ನು ನೀಡುವುದಾಗಿ ಘೋಷಿಸಿದ್ದಾರೆ.ಇದಲ್ಲದೆ 10 ವರ್ಷಗಳ ಮಿಲಿಟರಿ ಸಹಗಭಾಗಿತ್ವವನ್ನ ಭಾರತದ ಜತೆ ಸ್ಥಾಪಿಸಿ ಸಾಕಷ್ಟು ಶಸ್ತ್ರಾಸ್ತ್ರ ಪೂರೈಸುವುದಾಗಿಯೂ ಅವರು ಹೇಳಿದ್ದಾರೆ. ಈ ವೇಳೆ ಎರಡೂ ದೇಶಗಳು 10 ವರ್ಷಗಳ ಮಿಲಿಟರಿ ಸಹಭಾಗಿತ್ವ ಅನಾವರಣ ಮಾಡಿವೆ. ಟ್ರಂಪ್‌ ಹಾಗೂ ಮೋದಿ ಅವರ ಈ ನಡೆಗಳು ಏಷ್ಯಾದಲ್ಲಿ ಪ್ರಾಬಲ್ಯ ಸ್ಥಾಪಿಸಲು ಯತ್ನಿಸುತ್ತಿರುವ ಚೀನಾಗೆ ಸವಾಲಾಗಿದೆ.

ಭಾರತವು ಈ ವೇಳೆ ಇನ್ನೂ 6 ಪಿ8ಐ ದೂರಗಾಮಿ ಸಬ್‌ಮರೀನ್‌ ನಿರೋಧಕ ವಿಮಾನಗಳನ್ನು ಅಮೆರಿಕದಿಂದ ಬಯಸಿದೆ. ಈಗಾಗಲೇ ಭಾರತದ ಬಳಿ ಇಂಥ 11 ವಿಮಾನ ಇವೆ. ಇದರ ಜೊತೆಗೆ ಟ್ಯಾಂಕ್‌ ದಾಳಿ ತಡೆಯಬಲ್ಲ ಜಾವೆಲಿನ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಯುದ್ಧದ ವೇಳೆ ದಾಳಿಗೆ ಬಳಸಬಹುದಾದ ಸ್ಟ್ರೈಕರ್‌ ವಾಹನಗಳನ್ನು ಭಾರತಕ್ಕೆ ಪೂರೈಸಲು ಮತ್ತು ಮುಂದೆ ಅದನ್ನು ಭಾರತದಲ್ಲೇ ಉತ್ಪಾದಿಸಲೂ ಅಮೆರಿಕ ಸಮ್ಮತಿಸಿದೆ.

ಚೌಕಾಸಿ ಮಾಡೋದ್ರಲ್ಲಿ ಮೋದಿಗೆ ಎದುರಾಳಿ ಇಲ್ಲ: ಟ್ರಂಪ್‌ ಮೆಚ್ಚುಗೆವಾಷಿಂಗ್ಟನ್‌: ಅಮೆರಿಕದೊಂದಿಗೆ ವ್ಯಾಪಾರ ಮಾಡುವ ದೇಶಗಳು ವಿಧಿಸುವ ಅಧಿಕ ತೆರಿಗೆಯ ವಿಷಯದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ವಿಷಯದಲ್ಲಿ ಮಾತ್ರ ತಮ್ಮ ನಿಲುವನ್ನು ಕೊಂಚ ಮೃದುಗೊಳಿಸಿದಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೌಕಾಸಿ ನಿಪುಣ’ ಎಂದು ಕರೆದಿರುವ ಟ್ರಂಪ್‌, ‘ಮೋದಿಯವರೊಂದಿಗೆ ಚೌಕಾಸಿ ಮಾಡುವುದು ಬಲು ಕಷ್ಟ. ಅವರು ನನಗಿಂತಲೂ ಚೆನ್ನಾಗಿ ಚೌಕಾಸಿ ಮಾಡುತ್ತಾರೆ. ಅವರಿಗೆ ಈ ವಿಷಯದಲ್ಲಿ ಎದುರಾಳಿಗಲೇ ಇಲ್ಲ’ ಎಂದು ಹಾಸ್ಯಮಯವಾಗಿ ಶ್ಲಾಘಿಸಿದ್ದಾರೆ. ಜೊತೆಗೆ, ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಗ್ರ ರಾಣಾ ಗಡೀಪಾರಿಗೆ ಟ್ರಂಪ್‌ ಒಪ್ಪಿಗೆ ವಿಶ್ವದ ಅತಿದುಷ್ಟ ಭಾರತಕ್ಕೆ ಗಡೀಪಾರು: ಟ್ರಂಪ್‌

ವಾಷಿಂಗ್ಟನ್‌: 26/11 ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹಾವುರ್‌ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೇ ವೇಳೆ ಘೋಷಿಸಿದರು.

ಇತ್ತೀಚೆಗೆ ಅಮೆರಿಕ ಸುಪ್ರೀಂ ಕೋರ್ಟ್‌, ಆತನ ಗಡೀಪಾರಿಗೆ ಒಪ್ಪಿಗೆ ಸೂಚಿಸಿತ್ತು. ಈ ಬಗ್ಗೆ ಮೋದಿ ಜತೆಗಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ‘ವಿಶ್ವದ ಅತಿ ದುಷ್ಟ ವ್ಯಕ್ತಿಯನ್ನು ಭಾರತಕ್ಕೆ ಗಡೀಪಾರು ಮಾಡಲು ನನ್ನ ಸರ್ಕಾರ ಸಂತೋಷಪಡುತ್ತದೆ. ತಕ್ಷಣವೇ ಆತನನ್ನು ಭಾರತಕ್ಕೆ ಹಸ್ತಾಂತರಿಸಿ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆ’ ಎಂದು ರಾಣಾ ಹೆಸರೆತ್ತದೇ ಪ್ರಕಟಿಸಿದರು.

ಅಮೆರಿಕದಲ್ಲಿ ಬಂಧಿತನಾಗಿದ್ದ ರಾಣಾ ಗಡೀಪಾರಿಗೆ ಭಾರತ 16 ವರ್ಷದಿಂದ ಯತ್ನಿಸುತ್ತಿದೆ. ಆತ 26/11 ಮುಂಬೈ ದಾಳಿಗೆ ಸರ್ವೇ ನಡೆಸಿದ್ದ ಡೇವಿಡ್‌ ಹೆಡ್ಲಿಗೆ ತನ್ನ ಮುಂಬೈ ವಲಸೆ ಕಚೇರಿಯಲ್ಲಿ ಆಶ್ರಯ ನೀಡಿದ್ದ.ಇದಲ್ಲದೆ, ಭಾರತ ಇನ್ನೂ ಇಂಥ ಕೆಲವು ಗಡೀಪಾರಿಗೆ ಮನವಿ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಡೀಪಾರು ನಡೆಯಬಹುದು ಎಂದು ಟ್ರಂಪ್‌ ಹೇಳಿದರು.

ಇತ್ತೀಚೆಗೆ ಭಾರತಕ್ಕೆ ಬೇಕಾಗಿರುವ ಪಾತಕಿ ಲಾರೆನ್ಸ್‌ ಬಿಷ್ಣೋಯೊ ಸೋದರ ಅನ್ಮೋಲ್‌ ಬಿಷ್ಣೋಯಿ ಅಮೆರಿಕದಲ್ಲಿ ಸಿಕ್ಕಿಬಿದ್ದಿದ್ದ. ಹೀಗಾಗಿ ಮುಂದಿನ ಸರದಿ ಆತನದ್ದು ಎನ್ನಲಾಗಿದೆ.

ಕಸಬ್‌ನನ್ನೇ ಬಂಧಿಸಿದ್ದೆವು, ಈಗ ರಾಣಾನ ಸೆರೆಗೆ ಸಿದ್ಧ: ಮಹಾ ಸಿಎಂ ಫಡ್ನವೀಸ್‌ಮುಂಬೈ: 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ತಹಾವುರ್‌ ರಾಣಾ ಗಡೀಪಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಮತ ವ್ಯಕ್ತಪಡಿಸಿದ ಬೆನ್ನಲ್ಲೇ ರಾಣಾನನ್ನು ಬಂಧಿಸಿಡಲು ನಾವು ಸಿದ್ಧರಾಗಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ಶುಕ್ರವಾರ ಈ ಬಗ್ಗೆ ಮಾತನಾಡಿದ ಫಡ್ನವೀಸ್‌,‘ಉಗ್ರ ಅಜ್ಮಲ್‌ ಕಸಬ್‌ನನ್ನೇ ಬಂಧಿಸಿದ್ದೆವು, ಈಗ ರಾಣಾನನ್ನು ಬಂಧಿಸುತ್ತೇವೆ. ನಮಗೆ ಎಲ್ಲಾ ಸಾಮರ್ಥ್ಯವಿದೆ. ಪ್ರಕರಣ ಮುಂಬೈಗೆ ಸಂಬಂಧಿಸಿರುವುದರಿಂದ, ಇಲ್ಲಿಯೇ ಬಂಧಿಸುತ್ತೇವೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗಲಿದೆ. ಈತನನ್ನು ಭಾರತಕ್ಕೆ ಗಡೀಪಾರು ಮಾಡುವಲ್ಲಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದರು. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೂ ಧನ್ಯವಾದ ಸಲ್ಲಿಸಿದರು.

ಪ್ರಧಾನಿ ಮೋದಿಗೆ ಆತ್ಮೀಯ ಉಡುಗೊರೆ ನೀಡಿದ ಟ್ರಂಪ್‌ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಅವರ್‌ ಜರ್ನಿ ಟುಗೆದರ್‌’ (ನಮ್ಮ ಒಟ್ಟಿಗಿನ ಪ್ರಯಾಣ) ಎಂಬ ಪುಸ್ತಕವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಡುಗೊರೆಯಾಗಿ ನೀಡಿದ್ದಾರೆ. ಅದರ ಮುಖಪುಟದಲ್ಲಿ, ‘ಪ್ರಧಾನಿಯವರೇ, ನೀವು ಅದ್ಭುತ’ ಎಂದು ಬರೆಯಲಾಗಿದ್ದು, ಟ್ರಂಪ್‌ರ ಸಹಿಯೂ ಇದೆ.2021ರಲ್ಲಿ ಮುದ್ರಣವಾದ ‘ಅವರ್‌ ಜರ್ನಿ ಟುಗೆದರ್‌’ ಪುಸ್ತಕದಲ್ಲಿ 320 ಪುಟಗಳಿದ್ದು, ಟ್ರಂಪ್‌ ಅಧ್ಯಕ್ಷರಾಗಿದ್ದ ಮೊದಲ ಅವಧಿಯ ಆಯ್ದ ಚಿತ್ರಗಳು ಇದರಲ್ಲಿವೆ. ‘ಹೌಡಿ ಮೋದಿ’, ‘ನಮಸ್ತೆ ಟ್ರಂಪ್‌’ ರ್‍ಯಾಲಿಗಳ ಚಿತ್ರಗಳನ್ನೂ ಇದು ಒಳಗೊಂಡಿದೆ. ಇದರೊಂದಿಗೆ, 2020ರಲ್ಲಿ ತಾವು ಭಾರತಕ್ಕೆ ಭೇಟಿ ನೀಡಿದ್ದಾಗ ಪ್ರಸಿದ್ಧ ತಾಜ್‌ ಮಹಲ್‌ ಎದುರು ತೆಗೆಸಿಕೊಂಡಿದ್ದ ಫೋಟೋವನ್ನೂ ಟ್ರಂಪ್‌ ನೀಡಿದ್ದಾರೆ.

 ಮೋದಿಯವರನ್ನು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ ಟ್ರಂಪ್‌, ‘ನಾವು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಂಡೆವು’ ಎಂದರು. ಇದಕ್ಕೆ ಮುಗುಳ್ನಗೆಯೊಂದಿಗೆ ಉತ್ತರಿಸಿದ ಮೋದಿ, ‘ನಿಮ್ಮನ್ನು ಮತ್ತೊಮ್ಮೆ ನೋಡಿ ಸಂತಸವಾಯಿತು’ ಎಂದರು. ಮೋದಿಯವರಿಗಾಗಿ ಟ್ರಂಪ್‌ ಕುರ್ಚಿಯನ್ನು ಎಳೆದು ಕುಳಿತುಕೊಳ್ಳಲು ಅನುಕೂಲ ಮಾಡಿಕೊಟ್ಟದ್ದು ಅವರಿಬ್ಬರ ಆತ್ಮೀಯತೆಗೆ ಸಾಕ್ಷಿಯಂತಿತ್ತು.

ಉಕ್ರೇನ್‌ ವಿಷಯದಲ್ಲಿ ನಾವು ತಟಸ್ಥ ಅಲ್ಲ, ನಾವು ಶಾಂತಿಯ ಪರ: ಮೋದಿ

ವಾಷಿಂಗ್ಟನ್‌: ಉಕ್ರೇನ್‌ ಯುದ್ಧ ನಿಲ್ಲಿಸುವ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಪ್ರಯತ್ನ ಶ್ಲಾಘಿಸಿರುವ ಪ್ರಧಾನಿ ಮೋದಿ, ‘ಕದನಕ್ಕೆ ಪರಿಹಾರವನ್ನು ರಣರಂಗದಲ್ಲಿ ಅಲ್ಲ, ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಕಂಡುಕೊಳ್ಳಬಹುದು’ ಎಂದು ಪುನರುಚ್ಚರಿಸಿದ್ದಾರೆ. ಜೊತೆಗೆ, ‘ನಾನು ರಷ್ಯಾ ಹಾಗೂ ಉಕ್ರೇನ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಎರಡೂ ದೇಶದ ನಾಯಕರನ್ನು ಭೇಟಿಯಾಗಿರುವುದರಿಂದ ಭಾರತ ಯುದ್ಧದ ವಿಷಯದಲ್ಲಿ ತಟಸ್ಥ ನಿಲುವನ್ನು ತಾಳಿದೆ ಎಂದು ಜಗತ್ತು ಭಾವಿಸಿದೆ. ಆದರೆ ನಿಜವಾಗಿ ನಾವು ಶಾಂತಿಯ ಪರವಾಗಿದ್ದೇವೆ’ ಎಂದ ಮೋದಿ, ಪುಟಿನ್‌ರನ್ನು ಭೇಟಿಯಾಗಿದ್ದಾಗ ‘ಇದು ಯುದ್ಧದ ಯುಗವಲ್ಲ’ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.

ಅದಾನಿ ಬಗ್ಗೆ ಚರ್ಚಿಸಿಲ್ಲ: ಮೋದಿ

ವಾಷಿಂಗ್ಟನ್‌: ಭಾರತದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ, ಅಮೆರಿಕದಲ್ಲಿ ವ್ಯಾಪಾರ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಚರ್ಚೆ ನಡೆಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

‘ಅದಾನಿ ಬಗ್ಗೆ ಚರ್ಚಿಸಿದರಾ’ ಎಂದು ಅಮೆರಿಕ ಪತ್ರಕರ್ತರು ಟ್ರಂಪ್‌ ಸಮ್ಮುಖದಲ್ಲೇ ಪ್ರಶ್ನಿಸಿದಾಗ ನೇರವಾಗಿ ಉತ್ತರಿಸಲು ಹಿಂಜರಿದ ಮೋದಿ, ’ಭಾರತ ಪ್ರಜಾಸತ್ತಾತ್ಮಕ ದೇಶ। ನಮ್ಮದು ವಸುಧೈವ ಕುಟುಂಬಕಂ ಸಂಸ್ಕೃತಿ. ಇಡೀ ವಿಶ್ವವೇ ನಮ್ಮದು ಎಂಬ ಭಾವನೆ ನಮ್ಮದು. ಪ್ರತಿ ಭಾರತೀಯನೂ ನನ್ನವ ಎಂಬುದು ನನ್ನ ಭಾವನೆ. ಆದರೆ ಯಾವುದೇ ವ್ಯಕ್ತಿಗತ (ಅದಾನಿ) ವಿಷಯಗಳ ಬಗ್ಗೆ ಎರಡು ದೇಶಗಳ ಮುಖ್ಯಸ್ಥರು ಮಾತುಕತೆ ನಡಸುವುದಿಲ್ಲ’ ಎಂದ ಉತ್ತರಿಸಿದರು.

 ಉಗ್ರ ರಾಣಾ ಗಡೀಪಾರಿಗೆ ಟ್ರಂಪ್‌ ಒಪ್ಪಿಗೆ ವಿಶ್ವದ ಅತಿದುಷ್ಟ ಭಾರತಕ್ಕೆ ಗಡೀಪಾರು: ಟ್ರಂಪ್‌

ವಾಷಿಂಗ್ಟನ್‌: 26/11 ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹಾವುರ್‌ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೇ ವೇಳೆ ಘೋಷಿಸಿದರು.

ಇತ್ತೀಚೆಗೆ ಅಮೆರಿಕ ಸುಪ್ರೀಂ ಕೋರ್ಟ್‌, ಆತನ ಗಡೀಪಾರಿಗೆ ಒಪ್ಪಿಗೆ ಸೂಚಿಸಿತ್ತು. ಈ ಬಗ್ಗೆ ಮೋದಿ ಜತೆಗಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ‘ವಿಶ್ವದ ಅತಿ ದುಷ್ಟ ವ್ಯಕ್ತಿಯನ್ನು ಭಾರತಕ್ಕೆ ಗಡೀಪಾರು ಮಾಡಲು ನನ್ನ ಸರ್ಕಾರ ಸಂತೋಷಪಡುತ್ತದೆ. ತಕ್ಷಣವೇ ಆತನನ್ನು ಭಾರತಕ್ಕೆ ಹಸ್ತಾಂತರಿಸಿ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆ’ ಎಂದು ರಾಣಾ ಹೆಸರೆತ್ತದೇ ಪ್ರಕಟಿಸಿದರು.

ಅಮೆರಿಕದಲ್ಲಿ ಬಂಧಿತನಾಗಿದ್ದ ರಾಣಾ ಗಡೀಪಾರಿಗೆ ಭಾರತ 16 ವರ್ಷದಿಂದ ಯತ್ನಿಸುತ್ತಿದೆ. ಆತ 26/11 ಮುಂಬೈ ದಾಳಿಗೆ ಸರ್ವೇ ನಡೆಸಿದ್ದ ಡೇವಿಡ್‌ ಹೆಡ್ಲಿಗೆ ತನ್ನ ಮುಂಬೈ ವಲಸೆ ಕಚೇರಿಯಲ್ಲಿ ಆಶ್ರಯ ನೀಡಿದ್ದ.ಇದಲ್ಲದೆ, ಭಾರತ ಇನ್ನೂ ಇಂಥ ಕೆಲವು ಗಡೀಪಾರಿಗೆ ಮನವಿ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಡೀಪಾರು ನಡೆಯಬಹುದು ಎಂದು ಟ್ರಂಪ್‌ ಹೇಳಿದರು.

ಇತ್ತೀಚೆಗೆ ಭಾರತಕ್ಕೆ ಬೇಕಾಗಿರುವ ಪಾತಕಿ ಲಾರೆನ್ಸ್‌ ಬಿಷ್ಣೋಯೊ ಸೋದರ ಅನ್ಮೋಲ್‌ ಬಿಷ್ಣೋಯಿ ಅಮೆರಿಕದಲ್ಲಿ ಸಿಕ್ಕಿಬಿದ್ದಿದ್ದ. ಹೀಗಾಗಿ ಮುಂದಿನ ಸರದಿ ಆತನದ್ದು ಎನ್ನಲಾಗಿದೆ.