ಸಾರಾಂಶ
ಬ್ಯಾಂಕ್ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಇಡಿ ಕಳೆದ ವರ್ಷ ಸೆಪ್ಟೆಂಬರ್ 1 ರಂದು ನರೇಶ್ ಗೋಯಲ್ ರನ್ನು ಬಂಧಿಸಿತ್ತು. ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮುಂಬೈ: ‘ನನಗೆ ಜೀವನದ ಮೇಲೆ ಭರವಸೇ ಹೋಗಿದೆ. ಹೀಗಾಗಿ ಜೈಲಿನಲ್ಲೇ ಸಾಯಲು ಬಿಡಿ’ ಎಂದು ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಶನಿವಾರ ನ್ಯಾಯಾಲಯದ ಎದುರು ಹೇಳಿಕೊಂಡಿದ್ದಾರೆ.
ಕೆನರಾ ಬ್ಯಾಂಕ್‌ಗೆ 538 ಕೋಟಿ ರು. ವಂಚನೆ ಮಾಡಿರುವ ಆರೋಪ ಹೊತ್ತಿರುವ ಗೋಯಲ್ ಅವರನ್ನು ಕಳೆದ ವರ್ಷ ಸೆ.1ರಂದು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿತ್ತು. ಈ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಕಾರಣ ಗೋಯಲ್ ಅವರನ್ನು ಶನಿವಾರ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರ ಎದುರು ಮಾತನಾಡಿದ ಅವರು ತಮ್ಮ ಆರೋಗ್ಯ ಸಂಪೂರ್ಣವಾಗಿ ಹಾಳಾಗಿರುವುದನ್ನು ಕೋರ್ಟ್ ಎದುರು ಹೇಳಿದರು.
‘ನನ್ನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ನನ್ನನ್ನು ಪದೇ ಪದೇ ಆಸ್ಪತ್ರೆಗೆ ಕರೆದೊಯ್ಯುವುದರಲ್ಲಿ ಯಾವುದೇ ಅರ್ಥವಿಲ್ಲ. ಆರ್ಥರ್ ರಸ್ತೆಯಲ್ಲಿರುವ ಜೈಲಿನಿಂದ ಜೆಜೆ ಆಸ್ಪತ್ರೆಗೆ ಪದೇ ಪದೇ ಹೋಗುವುದು ಸಹ ಹಿಂಸೆ ನೀಡುತ್ತಿದೆ.
ನನಗೆ ಜೀವನದ ಮೇಲಿನ ಭರವಸೆಯೇ ಇಲ್ಲವಾಗಿದೆ. ಹೀಗಾಗಿ ನನ್ನನ್ನು ಜೈಲಿನಲ್ಲೇ ಸಾಯಲು ಬಿಡಿ’ ಎಂದು ಗೋಯಲ್ ಹೇಳಿದರು. ಇದೇ ವೇಳೆ ಅವರು ತಮ್ಮ ಪತ್ನಿ ಹಾಸಿಗೆ ಹಿಡಿದಿದ್ದಾಳೆ ಹಾಗೂ ಪುತ್ರಿ ಸಹ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಅಳಲು ತೋಡಿಕೊಂಡರು.
ಗೋಯಲ್ ಅವರ ಮಾತು ಕೇಳಿದ ಬಳಿಕ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ, ‘ನಾನು ತಾಳ್ಮೆಯಿಂದ ಗೊಯಲ್ ಮಾತುಗಳನ್ನು ಆಲಿಸಿದೆ. ಮಾತನಾಡುವಾಗ ಅವರ ದೇಹ ನಡುತ್ತಿತ್ತು. ನಿಂತುಕೊಳ್ಳಲೂ ಸಹ ಅವರಿಗೆ ಸಹಾಯ ಬೇಕು’ ಎಂದರು ಹಾಗೂ ಪ್ರಕರಣದ ವಿಚಾರಣೆಯನ್ನು ಜ.16ಕ್ಕೆ ಮುಂದೂಡಿದರು.