ಸಾರಾಂಶ
ನವದೆಹಲಿ: ಕೋಲ್ಕತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಬಳಿಕ ಆಸ್ಪತ್ರೆ ಮೇಲೆ ದಾಳಿಯ ಘಟನೆ ಬೆನ್ನಲ್ಲೇ, ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈದ್ಯಕೀಯ ಸಮುದಾಯ, ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಕೋರಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), 5 ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದೆ. ಅದರಲ್ಲಿ ‘ದೇಶದ ಎಲ್ಲ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು. ವಿಮಾನ ನಿಲ್ದಾಣಗಳಲ್ಲಿರುವಂತೆಯೇ ಭದ್ರತಾ ವ್ಯವಸ್ಥೆಯನ್ನ ಒದಗಿಸಬೇಕು. ಎಲ್ಲ ವೈದ್ಯರಿಗೂ ಭದ್ರತೆ ನೀಡಬೇಕು. ವಿಮಾನ ನಿಲ್ದಾಣಗಳ ರೀತಿ ಸಿಸಿಟಿವಿ, ಭದ್ರತಾ ಸಿಬ್ಬಂದಿಗಳ ನಿಯೋಜನೆ ಮತ್ತು ಪ್ರೋಟೋಕಾಲ್‌ಗಳನ್ನು ಆಸ್ಪತ್ರೆಗೆ ಒದಗಿಸಬೇಕು’ ಎಂದು ಎಂದು ಐಎಂಎ ಪತ್ರದಲ್ಲಿ ಉಲ್ಲೇಖಿಸಿದೆ.
ಐಎಂಎ ಬೇಡಿಕೆಗಳೇನು?
1. ವೈದ್ಯರ ಮೇಲಿನ ಹಿಂಸಾಚಾರವನ್ನುತಡೆಗಟ್ಟಲು ಮಹತ್ವದ ನೀತಿ ಜಾರಿಗೆ ತರಬೇಕು. 1897ರ ಸಾಂಕ್ರಾಮಿಕ ರೋಗ ಕಾಯ್ದೆಗೆ 2019ರ ಆಸ್ಪತ್ರೆ ಸಂರಕ್ಷಣಾ ಮಸೂದೆ 2023ರ ತಿದ್ದುಪಡಿ ಸೇರಿಸಿ ಕಾಯ್ದೆ ತರಬೇಕು.
2. ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು. ವಿಮಾನ ನಿಲ್ದಾಣದ ರೀತಿ ಭದ್ರತೆ ನೀಡಬೇಕು.
3. ಭದ್ರತಾ ಕಾಳಜಿ ಜೊತೆಗೆ 36 ಗಂಟೆಗಳ ಕರ್ತವ್ಯ ಪಾಳಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸುರಕ್ಷಿತ ಸ್ಥಳಗಳು, ವಿಶ್ರಾಂತಿಗೆ ಸುರಕ್ಷಿತ ಸ್ಥಳ ಸಮಸ್ಯೆಯನ್ನು ತುರ್ತಾಗಿ ಬಗೆ ಹರಿಸಬೇಕು
4. ನಿರ್ದಿಷ್ಟ ಕಾಲಮಿತಿಯೊಳಗೆ ಅಪರಾಧ ಪ್ರಕರಣಗಳನ್ನು ವೃತ್ತಿಪರ ತನಿಖೆಗೆ ಒಳಪಡಿಸಬೇಕು
5. ವಿಧ್ವಂಸಕ ಕೃತ್ಯದ ಗೂಂಡಾಗಳನ್ನು ಗುರುತಿಸಿ, ಶಿಕ್ಷೆ ನೀಡಬೇಕು. ಜೊತೆಗೆ ಕ್ರೌರ್ಯಕ್ಕೆ ಅನುಗುಣವಾಗಿ ದುಃಖಿತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು