ಸಾರಾಂಶ
ಚೆನ್ನೈ: ನೆಟ್‌ಫ್ಲಿಕ್ಸ್‌ಗಾಗಿ ಮಾಡಿದ ನಟಿ ನಯನತಾರಾ ಮಾಡಿದ ಸಾಕ್ಷ್ಯಚಿತ್ರದಲ್ಲಿ ‘ನಾನುಮ್ ರೌಡಿ ಧಾನ್’ ಸಿನಿಮಾದ ದೃಶ್ಯ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ, 10 ಕೋಟಿ ರು. ಪರಿಹಾರಕ್ಕೆ ಬೇಡಿಕೆಯಿಟ್ಟು ಕಾಲಿವುಡ್ ನಟ ಧನುಷ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಇದಕ್ಕೆ ನಯನತಾರಾ ಕಿಡಿಕಾರಿದ್ದು ‘ಧನುಷ್ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಕಾನೂನು ಮೂಲಕವೇ ಉತ್ತರಿಸುವೆ’ ಎಂದು ಬಹಿರಂಗ ಪತ್ರ ಬರೆದಿದ್ದಾರೆ.
‘ನಯನಾತಾರ ಬಿಯಾಂಡ್ ದಿ ಫೇರಿಟೇಲ್ ‘ ಡಾಕ್ಯುಮೆಂಟರಿ ಟ್ರೇಲರ್‌ನ್ನು ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಧನುಷ್ ನಿರ್ಮಾಣದ ನಾನುಮ್ ರೌಡಿ ಧಾನ್ ಸಿನಿಮಾದ ದೃಶ್ಯ ಬಳಕೆ ಆಗಿದೆ ಎಂದು ನಟ ಲೀಗಲ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ನಯನಾತಾರಾ ಇನ್‌ಸ್ಟಾಗ್ರಾಂನಲ್ಲಿ ತಿರುಗೇಟು ನೀಡಿದ್ದಾರೆ.
‘2 ವರ್ಷಗಳ ಕಾಲ ನಿಮ್ಮ ಬಳಿ ಎನ್‌ಒಸಿಗೆ ಹೋರಾಡಿದ ಬಳಿಕ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಡಾಕ್ಯುಮೆಂಟರಿ ರಿಲೀಸ್‌ಗೆ ನಿಮ್ಮ ಅನುಮತಿಗೆ ಕಾದ ಬಳಿಕ, ನೀವು ಒಪ್ಪದೇ ಇರುವುದಕ್ಕೆ ಈ ವಿಚಾರವನ್ನು ಕೈಬಿಡಲಾಗಿತ್ತು ಹಾಗೂ ಸಾಕ್ಷ್ಯಚಿತ್ರವನ್ನು ಮರು ಚಿತ್ರಿಸಿದ್ದೆವು. ಸಾಕ್ಷ್ಯಚಿತ್ರಗಳಲ್ಲಿ ಬಳಸಲಾದ ದೃಶ್ಯಗಳನ್ನು ಫೋನ್‌ಗಳಲ್ಲಿ ಚಿತ್ರಿಸಲಾಗಿದೆ. ನಾನು ನಿಮ್ಮ ಲೀಗಲ್ ನೋಟಿಸ್ ಸ್ವೀಕರಿಸುತ್ತಿದ್ದೇನೆ. ಕಾನೂನಾತ್ಮಕವಾಗಿಯೇ ಹೋರಾಡುತ್ತೇನೆ.
ನೀವು ಎನ್‌ಒಸಿ ನೀಡಲು ನಿರಾಕರಿಸಿರುವುದಕ್ಕೆ ಕಾನೂನಿನಲ್ಲಿ ಹೋರಾಡಬಹುದು. ಆದರೆ ಅದಕ್ಕೆ ನೈತಿಕ ಅಂಶವಿದೆ ಎಂಬುದನ್ನು ನಿಮಗೆ ನೆನಪಿಸಲು ಬಯಸುತ್ತೇನೆ. ಅದನ್ನು ದೇವರ ನ್ಯಾಯಾಲಯದಲ್ಲಿ ಸಮರ್ಥಿಸಬೇಕಿದೆ’ ಎಂದು ಸುದೀರ್ಘವಾಗಿ ಬರೆದಿದ್ದಾರೆ.ಆದರೆ ಧನುಷ್ ನಟಿ ನಯನತಾರಾ ಪೋಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಟಿ ದಿಶಾ ಪಾಟ್ನಿ ತಂದೆಗೆ ಉನ್ನತ ಹುದ್ದೆ ಕೊಡಿಸುವ ಭರವಸೆ: ₹25 ಲಕ್ಷ ವಂಚನೆ
ಬರೇಲಿ (ಉ.ಪ್ರ.): ನಟಿ ದಿಶಾ ಪಾಟ್ನಿ ಅವರ ತಂದೆ ಹಾಗೂ ಡೆಪ್ಯುಟಿ ಎಸ್ಪಿಯಾದ ಜಗದೀಶ್ ಸಿಂಗ್ ಪಾಟ್ನಿ ಅವರಿಗೆ 5 ಜನರ ಗುಂಪೊಂದು ಸರ್ಕಾರಿ ಆಯೋಗದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಭರಸವೆ ನೀಡಿ 25 ಲಕ್ಷ ರು.ಗಳನ್ನು ವಂಚಿಸಿದೆ.ಆರೋಪಿಗಳು ತಮಗೆ ರಾಜಕೀಯ ನಾಯಕರ ನಂಟಿದೆ ಎಂದು ಜಗದೀಶ್ ಅವರನ್ನು ನಂಬಿಸಿ ಅವರಿಂದ 5 ಲಕ್ಷ ರು. ನಗದು ಹಾಗೂ 20 ಲಕ್ಷ ರು.ಅನ್ನು 3 ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು ವಂಚಿಸಿದ್ದರು.
ಈ ಐವರು ವಂಚಕರ ವಿರುದ್ಧ ಶುಕ್ರವಾರ ರಾತ್ರಿ ಬರೇಲಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಚೀನಾದಲ್ಲಿ ವಿದ್ಯಾರ್ಥಿಯಿಂದ ಸರಣಿ ಚೂರಿ ಇರಿತ: 8 ಬಲಿ
ಬೀಜಿಂಗ್: ಚೀನಾದ ಪೂರ್ವ ನಗರ ವುಕ್ಸಿಯಲ್ಲಿ ಶನಿವಾರ ಸಂಜೆ 21 ವರ್ಷದ ವಿದ್ಯಾರ್ಥಿಯೊಬ್ಬ ಸರಣಿ ಚೂರಿ ಇರಿತ ಕೃತ್ಯ ಎಸಗಿದ್ದು, 8 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ. ಚೀನಾದ ದಕ್ಷಿಣ ನಗರವಾದ ಝುಹೈನಲ್ಲಿ ಕ್ರೀಡಾ ಕೇಂದ್ರದ ಹೊರಗೆ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ನಂತರ 35 ಜನರು ಸಾವನ್ನಪ್ಪಿದರು ಮತ್ತು 43 ಜನರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಛತ್ತೀಸಗಢದಲ್ಲಿ 5 ನಕ್ಸಲರ ಹತ್ಯೆ
ರಾಯಪುರ: ಛತ್ತೀಸಗಢದಲ್ಲಿ ಬಸ್ತರ್ ಪ್ರದೇಶದ ಶನಿವಾರ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿ ನಡುವೆ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಆ್ 5 ನಕ್ಸಲರು ಸಾವನ್ನಪ್ಪಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.ಇದರಿಂದಾಗಿ ಈ ವರ್ಷ ಛತ್ತೀಸಗಢದಲ್ಲಿ ಇದುವರೆಗೆ 197 ನಕ್ಸಲರ ಸಂಹಾರ ಮಾಡಿದಂತಾಗಿದೆ.
ಶನಿವಾರ ನಾರಾಯಣಪುರ ಮತ್ತು ಕಾಂಕೇರ್ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಉತ್ತರ ಅಬುಜ್ಮದ್‌ನ ಕಾಡಿನಲ್ಲಿ ಭದ್ರತಾ ಸಿಬ್ಬಂದಿಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಗುಂಡಿನ ಕಾಳಗ ನಡೆದಿದೆ. ಬಳಿಕ ಅಪಾರ ಪ್ರಮಾಣದ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಧರ್ಮಕ್ಕೆ ಅಪಚಾರ: ಅಕಾಲಿ ದಳ ಅಧ್ಯಕ್ಷ ಸ್ಥಾನಕ್ಕೆ ಬಾದಲ್ ರಾಜೀನಾಮೆ
ಚಂಡೀಗಢ: ಸಿಖ್ ಧರ್ಮಕ್ಕೆ ಅಪಚಾರವೆಸಗಿ, ಸಿಖ್ಖರ ಪರಮೋಚ್ಚ ಧಾರ್ಮಿಖ ಸಂಸ್ಥೆ ಅಕಾಲ್ ತಖ್ತ್‌ನಿಂದ ತಪ್ಪಿತಸ್ಥ ಎಂದು ಘೋಷಿತರಾಗಿದ್ದ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಪಕ್ಷದ ನಾಯಲ ದಲ್ಜೀತ್ ಸಿಂಗ್ ಚೀಮಾ, ‘ಬಾದಲ್ ಅವರು ಪಕ್ಷದ ಕಾರ್ಯಕಾರಿ ಸಭೆಗೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷದ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ’ ಎಂದಿದ್ದಾರೆ.
2007ರಿಂದ 2017ರ ಅವಧಿಯಲ್ಲಿ ಅಕಾಲಿ ದಳ ಹಾಗೂ ಸರ್ಕಾರದಿಂದ ಆದ ತಪ್ಪುಗಳಿಂದಾಗಿ ಬಾದಲ್ ಧರ್ಮಕ್ಕೆ ಅಪಚಾರ ಮಾಡಿದ್ದಾರೆ ಎಂದು ಅಕಾಲ್ ತಕ್ತ್ ಆ.30ರಂದು ಘೊಷಿಸಿತ್ತು. ಆದರೆ ಯಾವುದೇ ಶಿಕ್ಷೆ ವಿಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕಾಲಿ ದಳ ಇತ್ತೀಚಿನ ಉಪಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿತ್ತು.