ಜಮ್ಮು- ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ 3 ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಿರೀಕ್ಷೆಗೂ ಮೀರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಏರುವಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಯಶಸ್ವಿಯಾಗಿದೆ.

ಶ್ರೀನಗರ/ಜಮ್ಮು: ಜಮ್ಮು- ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ 3 ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಿರೀಕ್ಷೆಗೂ ಮೀರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಏರುವಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಯಶಸ್ವಿಯಾಗಿದೆ. ಮತ್ತೊಂದೆಡೆ ಬಿಜೆಪಿ 29 ಸ್ಥಾನ ಗೆಲ್ಲುವುದರೊಂದಿಗೆ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ ದಯನೀಯ ಸೋಲು ಕಂಡಿದೆ.

ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ ಘೋಷಣೆ ಮಾಡುವುದರೊಂದಿಗೆ ಒಮರ್‌ 2ನೇ ಬಾರಿ ಸಿಎಂ ಗಾದಿ ಏರಲು ಕ್ಷಣಗಣನೆ ಆರಂಭವಾಗಿದೆ.

90 ಸ್ಥಾನ ಬಲದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್‌ಸಿ 42. ಕಾಂಗ್ರೆಸ್‌ 6, ಬಿಜೆಪಿ 29, ಪಿಡಿಪಿ 3 ಮತ್ತು ಇತರರು 10 ಸ್ಥಾನ ಗೆದ್ದಿದ್ದಾರೆ.

ದಶಕದ ಬಳಿಕ ಚುನಾವಣೆ:

ಕಣಿವೆ ರಾಜ್ಯದಲ್ಲಿ 2014ರಲ್ಲಿ ಕಡೆಯ ಬಾರಿಗೆ ವಿಧಾನಸಭಾ ಚುನಾವಣೆ ನಡೆದಿದ್ದು ಪಿಡಿಪಿ-ಬಿಜೆಪಿ ಮೈತ್ರಿಕೂಟ ಸರ್ಕಾರ ನಡೆಸಿತ್ತು. ಆದರೆ 2019ರಲ್ಲಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಮಾಡಿ, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸಿತ್ತು.

ನಿರೀಕ್ಷೆ ಮೀರಿ ಗೆಲುವು:

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಮುನ್ನಡೆ ಸುಳಿವು ನೀಡಿದ್ದರೆ, ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸಾಧ್ಯತೆ ಊಹಿಸಿದ್ದವು. ಆದರೆ ಎಲ್ಲರ ನಿರೀಕ್ಷೆ ಮೀರಿ ಎನ್‌ಸಿ- ಕಾಂಗ್ರೆಸ್‌ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬಂದಿವೆ. ಈ ಹಿಂದೆ 2009-14ರ ಅವಧಿಯಲ್ಲೂ ರಾಜ್ಯವನ್ನು ಇದೇ ಮೈತ್ರಿಕೂಟ ಆಳಿತ್ತು.

ಬಿಜೆಪಿ ಸರ್ವಾಧಿಕ ಸಾಧನೆ:

ಬಿಜೆಪಿ ಕಳೆದ ಬಾರಿ 25 ಸ್ಥಾನ ಗೆದ್ದಿದ್ದು, ಈ ಬಾರಿ ದಾಖಲೆಯ 29 ಸ್ಥಾನ ಗೆದ್ದು ಸಾಧನೆ ಉತ್ತಮ ಪಡಿಸಿಕೊಂಡಿದೆ. ಇನ್ನು ಜಮ್ಮು ಭಾಗದಲ್ಲಿ ಕಾಂಗ್ರೆಸ್‌ ಕೇವಲ 1 ಸ್ಥಾನ ಗೆದ್ದಿದೆ.

ಮೆಹಬೂಬಾ ಪಕ್ಷ ಕಳಪೆ ಸಾಧನೆ:

ವಿಶೇಷವೆಂದರೆ 2009ರ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಬಿಜೆಪಿ ಜೊತೆಗೂಡಿ ಅಧಿಕಾರ ನಡೆಸಿದ್ದ ಮೆಹಬೂಬಾ ಮುಫ್ತಿ ಅವರ ಪಿಡಿಪಿ ದಯನೀಯ ಸೋಲು ಕಂಡಿದೆ. ಇನ್ನು ಭಯೋತ್ಪಾದನಾ ಕಾಯ್ದೆಯಡಿ ಬಂಧಿತರಾಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಒಮರ್‌ ಅಬ್ದುಲ್ಲಾ ಅವರನ್ನೇ ಸೋಲಿಸಿ ಸಂಚಲನ ಉಂಟು ಮಾಡಿದ್ದ ಎಂಜಿನಿಯರ್‌ ರಶೀದ್‌ ಅವರ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ವಿಫಲವಾಗಿದೆ. ಯಾವುದೇ ಕ್ಷೇತ್ರದಲ್ಲೂ ಅವರ ಅಭ್ಯರ್ಥಿಗಳು ಮುನ್ನಡೆ ಪಡೆಯುವಲ್ಲಿ ಸಫಲರಾಗಿಲ್ಲ. ರಶೀದ್‌, ಬಿಜೆಪಿಯ ಮುಖವಾಡ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದು ಫಲ ಕೊಟ್ಟಂತೆ ಕಂಡುಬಂದಿದೆ. ಇನ್ನೊಂದಡೆ ಗುಲಾಂ ನಬಿ ಆಜಾದ್‌ ಅವರ ಪಕ್ಷವೂ ವಿಫಲವಾಗಿದೆ.

==

ಒಮರ್‌ ನೂತನ ಕಾಶ್ಮೀರ ಸಿಎಂ: ಫಾರೂಖ್‌

ಶ್ರೀನಗರ: ‘ನ್ಯಾಷನಲ್‌ ಕಾನ್ಫರೆನ್ಸ್‌ನ ನೇತಾರ ಒಮರ್‌ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಮಂಗಳವಾರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅವರ ತಂದೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ ಈ ಘೋಷಣೆ ಮಾಡಿದ್ದಾರೆ.ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ಮಾತನಾಡಿರುವ ಫಾರೂಖ್‌, ‘ಈ ಫಲಿತಾಂಶ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಿರ್ಧಾರದ ವಿರುದ್ಧ ಜನತೆ ಇದ್ಧಾರೆ ಎಂಬುದಕ್ಕೆ ಉದಾಹರಣೆ. 2019ರ ಆ.5ರಂದು ತೆಗೆದುಕೊಂಡ ನಿರ್ಧಾರ ನಮಗೆ ಒಪ್ಪಿಗೆ ಇಲ್ಲ ಎಂಬುದರ ಕುರಿತು ಜನತೆ ತೀರ್ಪು ನೀಡಿದ್ದಾರೆ’ ಎಂದರು.

2008ರಲ್ಲಿ ಸಿಎಂ ಆಗಿದ್ದ ಒಮರ್‌1998ರಲ್ಲಿ ಲೋಕಸಭಾ ಸದಸ್ಯರಾಗುವುದರೊಂದಿಗೆ ರಾಜಕೀಯಕ್ಕೆ ಕಾಲಿಟ್ಟ ಒಮರ್‌, 1999ರಲ್ಲಿ ಲೋಕಸಭೆಗೆ ಪುನರಾಯ್ಕೆಯಾದರು. ಈ ವೇಳೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2001ರಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿ ನಿಯುಕ್ತಿಗೊಂಡರು. 2002ರಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಪಕ್ಷ ಸಂಘಟನೆಗೆ ಮುಂದಾದ ಒಮರ್‌ 2008ರಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಮರ್‌ ಸೋಲು ಕಂಡಿದ್ದರು.

===ಅಜ್ಜ, ಅಪ್ಪ, ಮಗ ಸಿಎಂಒಮರ್‌ ಅಬ್ದುಲ್ಲಾ ಅವರ ಅಜ್ಜ ಶೇಖ್‌ ಅಬ್ದುಲ್ಲಾ, ತಂದೆ ಫಾರೂಖ್ ಅಬ್ದುಲ್ಲಾ ಕೂಡಾ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಇದೀಗ ಒಮರ್‌ 2ನೇ ಬಾರಿ ಅದೇ ಪದವಿ ಏರುತ್ತಿದ್ದಾರೆ. ಶೇಖ್‌ ಅಬ್ದುಲ್ಲಾ 1951-53ರವರೆಗೆ ಕಾಶ್ಮೀರದ ಮೊದಲ ಚುನಾಯಿತ ಪ್ರಧಾನಿಯಾಗಿ, 1948-51 ಮತ್ತು 1975-82ರವರೆಗೆ ಸಿಎಂ ಆಗಿದ್ದರು.