ಸಾರಾಂಶ
ನವದೆಹಲಿ: ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಗುಜರಾತ್‌ನ ಕರಾವಳಿ ಮತ್ತು ದೆಹಲಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭರ್ಜರಿ 4400 ಕೋಟಿ ರು.ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ 8 ಇರಾನಿ ಪ್ರಜೆಗಳನ್ನು ಬಂಧಿಸಲಾಗಿದೆ.
ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಗುಜರಾತಿನ ಭಾರತೀಯ ಪ್ರಾದೇಶಿಕ ಜಲಭಾಗದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ), ನೌಕಾಪಡೆ, ಗುಜರಾತಿನ ಭಯೋತ್ಪಾದಕ ನಿಗ್ರಹ ದಳ ‘ಸಾಗರ್ ಮಂಥನ್ -4’ ಹೆಸರಿನಡಿ ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3500 ಕೋಟಿ ರು. ಬೆಲೆ ಬಾಳುವ 700 ಕೇಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡಿವೆ.
ಮತ್ತೊಂದೆಡೆ ದೆಹಲಿಯಲ್ಲಿ 900 ಕೋಟಿ ರು. ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ಈ ಎರಡೂ ದಾಳಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಒಂದೇ ದಿನ ಮಾದಕ ವಸ್ತು ನಿಗ್ರಹದಲ್ಲಿ ನಡೆದ ಎರಡು ಭರ್ಜರಿ ಕಾರ್ಯಾಚರಣೆಗಳು ಮಾದಕ ವಸ್ತು ಮುಕ್ತ ಭಾರತ ನಿರ್ಮಾಣದ ಮೋದಿ ಸರ್ಕಾರದ ಇಚ್ಚಾಶಕ್ತಿಗೆ ಉದಾಹರಣೆ ಎಂದು ಬಣ್ಣಿಸಿದ್ದಾರೆ.