ಸಾರಾಂಶ
ಜೂ.9ಕ್ಕೆ ತಮ್ಮ 3ನೇ ಅವಧಿ ಸರ್ಕಾರಕ್ಕೆ 1 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಸಾಮೂಹಿಕ ಅಭಿಯಾನದ ಸಿದ್ಧತೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ದಯಾರ್ದ್ರ ಮತ್ತು ಸಮರ್ಪಿತವಾಗಿದೆ.
ನವದೆಹಲಿ: ಜೂ.9ಕ್ಕೆ ತಮ್ಮ 3ನೇ ಅವಧಿ ಸರ್ಕಾರಕ್ಕೆ 1 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಸಾಮೂಹಿಕ ಅಭಿಯಾನದ ಸಿದ್ಧತೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ದಯಾರ್ದ್ರ ಮತ್ತು ಸಮರ್ಪಿತವಾಗಿದೆ. ನಮ್ಮ ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ’ ಎಂದು ಬಣ್ಣಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕಳೆದೊಂದು ದಶಕದಲ್ಲಿ ಬಡತನ ನಿರ್ಮೂಲನೆಗಾಗಿ ಪ್ರಮುಖ ಹೆಜ್ಜೆಗಳನ್ನಿಟ್ಟಿದೆ. ಬಡವರ ಸಬಲೀಕರಣ, ಮೂಲಸೌಕರ್ಯ ನಿರ್ಮಾಣ ಮತ್ತು ಅವರನ್ನು ಮುಖ್ಯವಾಹಿನಿ ಜತೆ ಸೇರಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಪಿಎಂ ಆವಾಸ್ ಯೋಜನೆ, ಉಜ್ವಲಾ ಯೋಜನೆ, ಜನ-ಧನ ಯೋಜನೆ, ಆಯುಷ್ಮಾನ್ ಭಾರತ್ ಮೊದಲಾದವು ಆಶ್ರಯ, ಶುದ್ಧ ಅಡುಗೆ ಅನಿಲ, ಬ್ಯಾಂಕಿಂಗ್ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸೌಲಭ್ಯಗಳನ್ನು ಕಲ್ಪಿಸಿವೆ.
ಇದರಿಂದಾಗಿ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ’ ಎಂದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ 3ನೇ ಅವಧಿ ಸರ್ಕಾರ ಜೂ.9ಕ್ಕೆ 1 ವರ್ಷ ಪೂರ್ಣಗೊಳಿಸಲಿದೆ. ಬುಧವಾರ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿಯೂ ಪ್ರಧಾನಿ ಅಭಿವೃದ್ಧಿ ಕಾರ್ಯಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಸಚಿವರಿಗೆ ತಾಕೀತು ಮಾಡಿದ್ದಾರೆ.