ಮೋದಿ 3ನೇ ಅವಧಿಗೆ ಹಲವು ಕಳಂಕ: ಖರ್ಗೆ

| Published : Jul 02 2024, 01:38 AM IST / Updated: Jul 02 2024, 06:09 AM IST

ಸಾರಾಂಶ

‘ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶಾದ್ಯಂತ ಅನೇಕ ದುರ್ಘಟನೆಗಳು ಸಂಭವಿಸಿವೆ. ಪ್ರಶ್ನೆ ಪತ್ರಿಕೆ ಸೋರಿಕೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ, ರೈಲ್ವೆ ಅಪಘಾತಗಳು, ವಿಮಾನ ನಿಲ್ದಾಣದ ಚಾವಣಿ ಕುಸಿತ, ಸೇತುವೆಗಳ ಕುಸಿತ...

 ನವದೆಹಲಿ :  ‘ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶಾದ್ಯಂತ ಅನೇಕ ದುರ್ಘಟನೆಗಳು ಸಂಭವಿಸಿವೆ. ಪ್ರಶ್ನೆ ಪತ್ರಿಕೆ ಸೋರಿಕೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ, ರೈಲ್ವೆ ಅಪಘಾತಗಳು, ವಿಮಾನ ನಿಲ್ದಾಣದ ಚಾವಣಿ ಕುಸಿತ, ಸೇತುವೆಗಳ ಕುಸಿತ... ಹೀಗೆ ಸಾಕಷ್ಟು ಘಟನೆಗಳು ಜರುಗಿವೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಕುರಿತ ಚರ್ಚೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯ ಪ್ರಚಾರದುದ್ದಕ್ಕೂ ಮೋದಿ ಈ ಹಿಂದಿನ 10 ವರ್ಷಗಳ ಆಡಳಿತ ಕೇವಲ ಟ್ರೇಲರ್‌ ಆಗಿತ್ತು. ನಿಜವಾದ ಪಿಕ್ಚರ್‌ ಇನ್ನೂ ಬಾಕಿಯಿದೆ ಎಂದು ಹೇಳುತ್ತಿದ್ದರು. ಆ ಪಿಕ್ಚರ್‌ ಹೇಗಿರುತ್ತದೆ ಎಂಬುದನ್ನು ಕಳೆದೊಂದು ತಿಂಗಳಿನಿಂದ ನೋಡಿದ್ದೇವೆ. ದೇಶದಲ್ಲಿ ಸಾಕಷ್ಟು ದುರ್ಘಟನೆಗಳು ಘಟಿಸಿವೆ’ ಎಂದು ಅಯೋಧ್ಯೆಯ ರಾಮಮಂದಿರದಲ್ಲಿ ನೀರು ಸೋರಿಕೆ, ಟೋಲ್‌ ದರ ಹೆಚ್ಚಳ, ರುಪಾಯಿ ದರ ಕುಸಿತ ಹಾಗೂ ಮೇಲೆ ಹೇಳಿದ ಘಟನೆಗಳನ್ನು ಪಟ್ಟಿ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಖರ್ಗೆ ಮಾತು ಕಡತದಿಂದ ಡಿಲೀಟ್‌

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಚುನಾವಣಾ ಭರವಸೆ ಹಾಗೂ ಆರ್‌ಎಸ್‌ಎಸ್‌ನ ವಿರುದ್ಧ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಡಿದ ಮಾತುಗಳನ್ನು ಚೇರ್ಮನ್‌ ಜಗದೀಪ್‌ ಧನಕರ್‌ ಕಡತದಿಂದ ತೆಗೆಸಿದರು.

‘ಆರ್‌ಎಸ್‌ಎಸ್‌ ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಸಂಘ. ಖರ್ಗೆ ಪತ್ರಿಕಾ ಹೇಳಿಕೆಗಳನ್ನು ತೋರಿಸಿ ಮಾತನಾಡುತ್ತಿದ್ದಾರೆ. ಅವುಗಳನ್ನು ಒಪ್ಪಲಾಗದು. ಅವರು ಆರೋಪಗಳಿಗೆ ಸೂಕ್ತ ಸಾಕ್ಷ್ಯ ಒದಗಿಸಬೇಕು’ ಎಂದು ಹೇಳಿ ಸಾಕಷ್ಟು ಅಂಶಗಳನ್ನು ಕಡತದಿಂದ ತೆಗೆಸಿದರು.