ಚಕ್ರ ಇರುವ ಸ್ಟ್ರೆಚರ್‌ ಮೇಲೆ ಮಲಗಿ ಬರ್ತಾರೆ ಕಾರ್ಮಿಕರು!

| Published : Nov 24 2023, 01:30 AM IST

ಚಕ್ರ ಇರುವ ಸ್ಟ್ರೆಚರ್‌ ಮೇಲೆ ಮಲಗಿ ಬರ್ತಾರೆ ಕಾರ್ಮಿಕರು!
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಕಾಶಿ ಸುರಂಗದಿಂದ ರಕ್ಷಣೆ ಅಂತಿಮಘಟ್ಟಕ್ಕೆ. ಇಂದು 41 ಜನ ಕಾರ್ಮಿಕರು ಹೊರಬರುವ ಸಾಧ್ಯತೆ. ಕಾರ್ಯಾಚರಣೆ ನಡೆಯುತ್ತಿರುವ 57 ಮೀ. ದೂರದಲ್ಲಿ 41 ಕಾರ್ಮಿಕರು. 50 ಮೀ. ದೂರದವರೆಗೆ 80 ಸೆಂ.ಮೀ. ಸುತ್ತಳತೆಯ ಪೈಪ್‌ ಅಳವಡಿಕೆ. ಶುಕ್ರವಾರ ಬೆಳಗ್ಗೆ ಕಾರ್ಮಿಕರು ಇರುವ ಸ್ಥಳವನ್ನು ತಲುಪುವ ಸಾಧ್ಯತೆ. ಇತ್ತ ಕಡೆಯಿಂದ ಪೈಪ್‌ ಮೂಲಕ ರಕ್ಷಣಾ ಸಿಬ್ಬಂದಿ ರವಾನೆಗೆ ಪ್ಲ್ಯಾನ್‌. ಬಳಿಕ ಆ ಕಡೆಯಿಂದ ಚಕ್ರದ ಸ್ಟ್ರೆಚರ್‌ ಮೇಲೆ ಮಲಗಿಸಿ ಒಬ್ಬೊಬ್ಬರ ರಕ್ಷಣೆ. 41 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲು 41 ಆ್ಯಂಬುಲೆನ್ಸ್‌ ಸಜ್ಜು.

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ರಕ್ಷಣಾ ಸಿಬ್ಬಂದಿ ವಿಸ್ತೃತ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಶುಕ್ರವಾರದ ವೇಳೆಗೆ 41 ಜನರನ್ನು ಒಬ್ಬರಾದ ಮೇಲೆ ಒಬ್ಬರಂತೆ ಚಕ್ರವಿರುವ ಪುಟ್ಟ ಸ್ಟ್ರೆಚರ್‌ ಮೇಲೆ ಮಲಗಿಸಿ ಹೊರತರಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.

ಹಲವು ಅಡ್ಡಿಗಳ ನಡುವೆ ರಕ್ಷಣಾ ಕಾರ್ಯ ಗುರುವಾರವೂ ಮುಂದುವರಿದಿದ್ದು, ಶುಕ್ರವಾರ ಬೆಳಗ್ಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಮಿಕರು ಎಲ್ಲಿದ್ದಾರೆ?:ಕಾರ್ಯಾಚರಣೆ ನಡೆಸುತ್ತಿರುವ ಸ್ಥಳದಿಂದ 57 ಮೀಟರ್‌ ದೂರದಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇದುವರೆಗೂ ಅಂದಾಜು 45ರಿಂದ 50 ಮೀಟರ್‌ ದೂರದವರೆಗೆ ಪೈಪ್‌ ಅಳವಡಿಸಲಾಗಿದೆ. ಈ ಪೈಪ್‌ 80 ಸೆಂ.ಮೀ. ಸುತ್ತಳತೆ ಹೊಂದಿದ್ದು, ಒಂದು ಸಲಕ್ಕೆ ಒಬ್ಬ ವ್ಯಕ್ತಿ ಅದರೊಳಗೆ ತೂರಬಹುದಾಗಿದೆ. ಪೈಪ್‌ ಅಳವಡಿಕೆ ಕೊನೆಗೆ 57 ಮೀಟರ್‌ ದೂರದ ಸ್ಥಳ ತಲುಪಿದಾಗ ರಕ್ಷಣಾ ಕಾರ್ಯ ಆರಂಭವಾಗಲಿದೆ. ಇದೇ ಪೈಪ್‌ ಮೂಲಕ ಕಾರ್ಮಿರನ್ನು ಒಬ್ಬೊಬ್ಬರಾಗಿ ಹೊರತರಲಾಗುತ್ತದೆ.

ರಕ್ಷಣೆ ನಡೆಯುವುದು ಹೀಗೆ:

ಪೈಪ್‌ ಅಳವಡಿಕೆ ಮುಗಿದ ಬಳಿಕ ಎನ್‌ಡಿಆರ್‌ಎಫ್‌ನ ಕೆಲ ಸಿಬ್ಬಂದಿ, ಕಾರ್ಮಿಕರು ಸಿಕ್ಕಿಬಿದ್ದ ಸ್ಥಳಕ್ಕೆ ತಾವೇ ಪೈಪ್‌ ಮೂಲಕ ತೆರಳಲಿದ್ದಾರೆ. ಆಗ ಅವರು ಪೈಪ್‌ನೊಳಗೆ ಯಾವುದೇ ಮಣ್ಣು, ಕಲ್ಲು ಹಾಗೂ ಇತರ ತ್ಯಾಜ್ಯ ಪದಾರ್ಥ ಇರದಂತೆ ನೋಡಿಕೊಂಡು, ಸ್ವಚ್ಛಗೊಳಿಸುತ್ತಾರೆ.

ಬಳಿಕ ಪೈಪ್‌ ಮೂಲಕ ಅಲ್ಲಿಗೆ ಚಕ್ರ ಇರುವ ಪುಟ್ಟ ಸ್ಟ್ರೆಚರ್‌ಗಳನ್ನು ಕಳುಹಿಸಲಾಗುತ್ತದೆ. ತದನಂತರದಲ್ಲಿ ಒಬ್ಬಬ್ಬ ಕಾರ್ಮಿಕರನ್ನು ಸ್ಟ್ರೆಚ್ಚರ್‌ ಮೇಲೆ ಮಲಗಿಸಿ, ಹೊರಗಿನಿಂದ ಹಗ್ಗದ ಮೂಲಕ ಅದನ್ನು ಎಳೆಯಲಾಗುತ್ತದೆ. ಹೀಗೆ ಮಲಗಿದ ಸ್ಥಿತಿಯಲ್ಲಿ ಕಾರ್ಮಿಕರು ಹೊರಬರಲಿದ್ದಾರೆ.

ಸುರಂಗದ ಹೊರಗೆ ಪ್ರತಿ ಕಾರ್ಮಿಕರಿಗೆ ಒಬ್ಬರಂತೆ 41 ಆ್ಯಂಬುಲೆನ್ಸ್‌ ಸಿದ್ಧಪಡಿಸಲಾಗಿದೆ. ಹೊರಬಂದ ಕಾರ್ಮಿಕರನ್ನು ಆ್ಯಂಬುಲೆನ್ಸ್‌ ಮೂಲಕ ಸಮೀಪದಲ್ಲಿ ಸಿದ್ಧಪಡಿಸಲಾಗಿರುವ 41 ಬೆಡ್‌ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಆರ್‌ಎಫ್‌) ಪ್ರಧಾನ ನಿರ್ದೇಶಕ ಅತುಲ್‌ ಕರ್ವಾಲ್ ಗುರುವಾರ ಮಾಹಿತಿ ನೀಡಿದ್ದಾರೆ.