ನೀಟ್‌ ಅಕ್ರಮ ತನಿಖೆಗೆ 4 ತಜ್ಞರ ತಂಡ ರಚನೆ

| Published : Jun 09 2024, 01:33 AM IST / Updated: Jun 09 2024, 04:23 AM IST

ಸಾರಾಂಶ

ಯುಪಿಎಸ್ಸಿ ನಿವೃತ್ತ ಅಧ್ಯಕ್ಷರ ನೇತೃತ್ವದಲ್ಲಿ ತನಿಖೆ ನಡೆಸಿ 1 ವಾರದಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ.

ನವದೆಹಲಿ: ವೈದ್ಯಕೀಯ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಾದ ‘ನೀಟ್‌-ಯುಜಿ’ ಫಲಿತಾಂಶದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ, ಈ ಆರೋಪಗಳ ಕುರಿತು ತನಿಖೆ ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯವು ನಾಲ್ವರು ತಜ್ಞರ ತಂಡ ರಚಿಸಿದೆ. ಈ ತಂಡವು, ‘ಆಯ್ದ 6 ಪರೀಕ್ಷಾ ಕೇಂದ್ರಗಳ 1500 ನೀಟ್‌ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌ ನೀಡಿದ ಕಾರಣ ಅವರೆಲ್ಲಾ ಗರಿಷ್ಠ ಅಂಕ ಪಡೆಯಲು ಸಾಧ್ಯವಾಯಿತು’ ಎಂಬ ಆರೋಪದ ತನಿಖೆ ನಡೆಸಲಿದೆ.

ಯುಪಿಎಸ್‌ಸಿ ಮಾಜಿ ಮುಖ್ಯಸ್ಥರ ನೇತೃತ್ವದ ನಾಲ್ವರ ತಂಡ ಆರೋಪಗಳ ಕುರಿತು ಪರಿಶೀಲನೆ ನಡೆಸಿ ಇನ್ನೊಂದು ವಾರದಲ್ಲಿ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ. ಅದರ ಆಧಾರದಲ್ಲಿ ನೀಟ್‌ ಪರೀಕ್ಷೆಗಳನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ಕೆಲ ಟಾಪರ್ಸ್‌ಗಳ ಅಂಕದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಈ ಬಾರಿ ನೀಟ್‌ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ದಾಖಲೆಯ 67 ವಿದ್ಯಾರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದರು. ಈ ಪೈಕಿ ಬಹುತೇಕರು, ಮೇಘಾಲಯ, ಹರ್ಯಾಣದ ಬಹದುರ್ಗಾ, ಛತ್ತೀಸ್‌ಗಢ ದಂತೇವಾಡಾ, ಬಲ್ಡೋಹ್‌, ಗುಜರಾತ್‌ನ ಸೂರತ್‌ ಮತ್ತು ಚಂಡೀಗಢದ ಪರೀಕ್ಷಾ ಕೇಂದ್ರಗಳಿಗೆ (ಒಟ್ಟು 6 ಕೇಂದ್ರಗಳು) ಸೇರಿದವರಾಗಿದ್ದಾರೆ. ಜೊತೆಗೆ ಅನುಕ್ರಮ ಸಂಖ್ಯೆಯಲ್ಲಿ 7 ಜನರು ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ಅಲ್ಲದೆ, ಜೂ.4ರಂದು ಯಾವುದೇ ಮುನ್ಸೂಚನೆ ನೀಡದೇ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಸಂಜೆ ಏಕಾಏಕಿ ನೀಟ್‌ ಫಲಿತಾಂಶ ಪ್ರಕಟಿಸಲಾಗಿತ್ತು. ಇವೆಲ್ಲವೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿವೆ.

ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ವಿದ್ಯಾರ್ಥಿಗಳು ಮತ್ತು ಪೋಷಕರು, ಪ್ರತಿಪಕ್ಷಗಳು, ವಿವಿಧ ರಾಜ್ಯ ಸರ್ಕಾರಗಳು ಪರೀಕ್ಷೆಯಲ್ಲಿ ಅಕ್ರಮದ ಆರೋಪ ಮಾಡಿದ್ದರು. ಕಾಂಗ್ರೆಸ್‌ ಹಾಗೂ ಆಪ್‌ ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆಗೆ ಒತ್ತಾಯಿಸಿದ್ದವು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ತಜ್ಞರ ತಂಡ ರಚನೆ ಮಾಡಿದೆ. ಅಕ್ರಮದ ಸಂದೇಹ ಕೇಳಿಬಂದಿರುವ ಆರೂ ಕೇಂದ್ರಗಳು ತನಿಖೆಗೆ ಒಳಪಡಲಿವೆ ಎಂದು ಎನ್‌ಟಿಎ ಮಹಾನಿರ್ದೇಶಕ ಸುಬೋಧ ಕಮಾರ್‌ ಸಿಂಗ್‌ ಹೇಳಿದ್ದಾರೆ.