ನೀಟ್‌ ಶ್ರೀಮಂತರ ಪರ : ರಾಹುಲ್‌

| Published : Jul 02 2024, 01:36 AM IST / Updated: Jul 02 2024, 06:12 AM IST

rahul gandhi

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪರೀಕ್ಷೆಯನ್ನು ಶ್ರೀಮಂತ ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಿ ರೂಪಿಸಲಾಗಿದೆಯೇ ಹೊರತೂ ಬುದ್ಧಿವಂತ ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಲ್ಲ ಎಂದು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪರೀಕ್ಷೆಯನ್ನು ಶ್ರೀಮಂತ ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಿ ರೂಪಿಸಲಾಗಿದೆಯೇ ಹೊರತೂ ಬುದ್ಧಿವಂತ ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಲ್ಲ ಎಂದು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ನೀಟ್‌ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗೆ ನಂಬಿಕೆ ಇಲ್ಲ. ಅವರು ಇದನ್ನು ವಿರೋಧಿಸುತ್ತಾರೆ. ಈ ಪರೀಕ್ಷಾ ವ್ಯವಸ್ಥೆ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ರೀತಿಯಲ್ಲಿ ಇಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿ ಇದನ್ನು ಹೇರುವ ಯತ್ನ ಮಾಡುತ್ತಿದೆ. 

ಈ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಾಣಿಜ್ಯ ಪರೀಕ್ಷೆಗಳಾಗಿ ಬದಲಾಯಿಸಿದೆ. ನೀವು ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದರೂ, ನಿಮ್ಮ ಬಳಿ ಹಣ ಇಲ್ಲದೆ ಹೋದಲ್ಲಿ ನೀವು ಕಾಲೇಜಿಗೆ ವೈದ್ಯಕೀಯ ಕೋರ್ಸ್‌ ಸೇರುವುದು ಸಾಧ್ಯವಿಲ್ಲ’ ಎಂದು ಆರೋಪಿಸಿದರು.

ರೈತರ ಸಮಸ್ಯೆ ಕಡೆಗಣನೆ

ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್‌, ‘ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಕಡೆಗಣಿಸಿರುವುದು ಮಾತ್ರವಲ್ಲದೇ, ಅವರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿದೆ. ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಬೆಂಬಲ ಬೆಲೆಗೆ ಕಾನೂನು ಸ್ವರೂಪವನ್ನೂ ನೀಡಿಲ್ಲ’ ಎಂದು ಆರೋಪಿಸಿದರು. ಆಗ ಎದ್ದು ನಿಂತ ಕೃಷಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌, ‘ಇದು ಸುಳ್ಳು ಆರೋಪ. ಬೆಳೆಗಳ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ’ ಎಂದು ಸ್ಪಷ್ಟಪಡಿಸಿದರು.

ಮೋದಿ ಪಾಲಿಗೆ ಮಣಿಪುರ ಭಾರತದ ಭಾಗವಲ್ಲ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಿಂಸಾಪೀಡಿತ ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿಲ್ಲ. ಹೀಗಾಗಿಯೇ ಅಲ್ಲಿ ದೊಡ್ಡಮಟ್ಟದ ಹಿಂಸಾಚಾರ ನಡೆದರೂ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ನೀಟ್‌ ಒಎಂಆರ್‌ ಗೋಲ್ಮಾಲ್‌: 2 ವಾರ ಬಳಿಕ ವಿಚಾರಣೆ

ನವದೆಹಲಿ: ನೀಟ್‌-ಯುಜಿ ಉತ್ತರಪತ್ರಿಕೆಯನ್ನು (ಒಎಂಆರ್‌ ಶೀಟ್‌) ಅದಲು ಬದಲು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ 2 ವಾರ ಮುಂದೂಡಿದೆ.ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಗಳು ಸೋಮವಾರ ನ್ಯಾ.ಸಿ.ಟಿ.ರವಿಕುಮರ್‌ ಮತ್ತು ನ್ಯಾ.ಮನೋಜ್‌ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಬಂದಿದ್ದವು. ಈ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು ತಮ್ಮ ಕಕ್ಷಿದಾರರ ಉತ್ತರಪತ್ರಿಕೆಯನ್ನು ಅದಲು ಬದಲು ಮಾಡಲಾಗಿದೆ. ಹೀಗಾಗಿ ಮರಳಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಕೋರಿದರು.

ಆದರೆ ಪರೀಕ್ಷೆ ಜೂನ್‌ನಲ್ಲೇ ಮುಗಿದು ಹೋಗಿದೆ ಎಂದ ನ್ಯಾಯಪೀಠ, ಬಳಿಕ ಈ ಕುರಿತ ಅರ್ಜಿಗಳನ್ನು ಎರಡು ವಾರ ಬಿಟ್ಟು ವಿಚಾರಣೆ ನಡೆಸುವುದಾಗಿ ಹೇಳಿತು.

ಇದೇ ರೀತಿಯ ಇನ್ನೊಂದು ಅರ್ಜಿಯ ಕುರಿತು ಕಳೆದ ವಾರ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಒಎಂಆರ್‌ ಶೀಟ್‌ ವಿವಾದದ ಕುರಿತು ಮೇಲ್ಮನವಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಎಷ್ಟು ಸಮಯ ಇದೆ ತಿಳಿಸಿ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಿತ್ತು.ನೀಟ್‌ ಅಕ್ರಮದ ಕುರಿತು ಸಲ್ಲಿಸಲಾಗಿರುವ ವಿವಿಧ ಅರ್ಜಿಗಳನ್ನು ಒಂದುಗೂಡಿಸಿ ಜು.8ರಂದು ವಿಚಾರಣೆ ನಡೆಸುವುದಾಗಿ ಈಗಾಗಲೇ ನ್ಯಾಯಪೀಠ ಹೇಳಿದೆ.