ಸಾರಾಂಶ
ನವದೆಹಲಿ/ಪಟನಾ: ನೀಟ್-ಯುಜಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಿಹಾರ ರಾಜಧಾನಿ ಪಟನಾದಲ್ಲಿ ಇಬ್ಬರನ್ನು ಬಂಧಿಸಿದೆ. ಇವು ಪ್ರಕರಣದ ತನಿಖೆ ಆರಂಭವಾದ ನಂತರ ಸಿಬಿಐ ಮಾಡಿದ ಮೊದಲ ಬಂಧನಗಳಾಗಿವೆ.
ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಅವರನ್ನು ಸಿಬಿಐ ವಿಚಾರಣೆಗೆ ಕರೆಸಿ ನಂತರ ಬಂಧಿಸಿದೆ. ಇವರು ಲೀಕ್ ಆದ ಪ್ರಶ್ನೆಪತ್ರಿಕೆ ಹಾಗೂ ಕೀ ಉತ್ತರ ಪಡೆದಿದ್ದ 24 ವಿದ್ಯಾರ್ಥಿಗಳಿಗೆ ಸುರಕ್ಷಿತ ಆಶ್ರಯ ನೀಡಿದ್ದರು ಎಂಬ ಆರೋಪ ಹೊತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ಮಾಹಿತಿ ನೀಡಿದ್ದು.‘ಮನೀಶ್ ಕುಮಾರ್ ತನ್ನ ಕಾರಿನಲ್ಲಿ ವಿದ್ಯಾರ್ಥಿಗಳನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದ ಮತ್ತು ಖಾಲಿ ಶಾಲೆಯನ್ನು ಸಹ ವ್ಯವಸ್ಥೆ ಮಾಡಿದ್ದ. ಅಲ್ಲಿ ಕನಿಷ್ಠ 24 ವಿದ್ಯಾರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆ ನೀಡಲಾಗಿತ್ತು ಮತ್ತು ಅವರು ಅವನ್ನು ಕಂಠಪಾಠ ಮಾಡಿದ್ದರು. ಆಶುತೋಷ್ ತನ್ನ ನಿವಾಸದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿದ್ದ.
ಮಹಾರಾಷ್ಟ್ರ ಕೇಸ್‌ಗಳು ಸಿಬಿಐಗೆ:
ಏತನ್ಮಧ್ಯೆ, ರಾಜ್ಯದಲ್ಲಿನ ಎಲ್ಲಾ ನೀಟ್ ಸಂಬಂಧಿತ ತನಿಖೆಯನ್ನು ಸಿಬಿಐಗೆ ವಹಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.