ಸಾರಾಂಶ
ಭುವನೇಶ್ವರ : ಯಾರನ್ನೂ ಭಾರತದಲ್ಲಿ ‘ವಿಶೇಷ ನಾಗರಿಕ’ ಎಂದು ಪರಿಗಣಿಸಿ ಅವರಿಗೆ ಮೀಸಲಾತಿಯೂ ಸೇರಿದಂತೆ ವಿಶೇಷ ಸವಲತ್ತುಗಳನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿದ್ದ ಪ್ರಧಾನಿ ತಮ್ಮ ವಾದವನ್ನು ಈ ರೀತಿ ಸಮರ್ಥಿಸಿಕೊಂಡಿದ್ದು, ಪರೋಕ್ಷವಾಗಿ ಮುಸ್ಲಿಂ ಮೀಸಲಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪಿಟಿಐಗೆ ಸಂದರ್ಶನದಲ್ಲಿ ನೀಡಿದ ಮೋದಿ, ‘ಭಾರತದಲ್ಲಿ ಅಂಬೇಡ್ಕರ್ ಕಾಲದಿಂದಲೂ ಧರ್ಮ ಆಧಾರಿತವಾಗಿ ಮೀಸಲು ನೀಡಿಲ್ಲ. ಆದರೆ ಕಾಂಗ್ರೆಸ್ ಈಗಿನ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ರೀತಿ ಭರವಸೆ ನೀಡುತ್ತಾ ಮುಸ್ಲಿಮರಿಗೆ ಟೆಂಡರ್‌ನಲ್ಲಿ ಮೀಸಲಾತಿಯೂ ಸೇರಿದಂತೆ ಜಾತಿ ಆಧಾರಿತವಾಗಿ ವಿಶೇಷ ಸವಲತ್ತುಗಳನ್ನು ನೀಡುವುದಾಗಿ ತಿಳಿಸಿದೆ. ಆದರೆ ಭಾರತದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದ್ದು, ಯಾರಿಗೂ ಜಾತಿ ಆಧಾರಿತವಾಗಿ ಯಾವುದೇ ವಿಶೇಷ ಸವಲತ್ತು ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಇದೇ ವೇಳೆ ಮುಸ್ಲಿಮರ ವಿರುದ್ಧ ಯಾವುದೇ ಮಾತನ್ನು ತಾವು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.
ತುಷ್ಟೀಕರಣ:
ಇದೇ ವೇಳೆ ಮುಸ್ಲಿಮರನ್ನು ಗುರಿಯಾಗಿಸಿ ಚುನಾವಣಾ ಪ್ರಚಾರ ಮಾಡುತ್ತಿರುವ ಕುರಿತು ಪ್ರಶ್ನಿಸಿದ್ದಕ್ಕೆ, ‘ಕಾಂಗ್ರೆಸ್ ಪ್ರಣಾಳಿಕೆಯ ಒಳಸುಳಿಗಳನ್ನು ಜನರಿಗೆ ಅರ್ಥೈಸುವ ಪ್ರಯತ್ನ ಮಾಡುತ್ತಿದ್ದೇನೆ. ಇದರಲ್ಲಿ ಯಾವುದೂ ಅಸತ್ಯವಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸಲು ತುಷ್ಟೀಕರಣ ಮಾರ್ಗವನ್ನು ಬಳಸಿದರೆ, ಬಿಜೆಪಿಯು ಎಲ್ಲರನ್ನು ಒಳಗೊಳ್ಳುವ ಸಂತುಷ್ಟೀಕರಣ ಮಾರ್ಗವನ್ನು ಬಳಸುತ್ತದೆ’ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಒಬಿಸಿ ಮೀಸಲು ದರೋಡೆ:
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತಂದ ಮೀಸಲು ತಿದ್ದುಪಡಿಯನ್ನು ಟೀಕಿಸುತ್ತಾ, ‘ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಒಬಿಸಿ ಮೀಸಲನ್ನು ದರೋಡೆ ಮಾಡಿದೆ’ ಎಂದು ಆರೋಪಿಸಿದರು.