ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ ₹1 ಕೋಟಿ ದಂಡ!

| Published : Jun 23 2024, 02:11 AM IST / Updated: Jun 23 2024, 04:44 AM IST

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ ಹಾಗೂ ಉಪನ್ಯಾಸಕರ ಅರ್ಹತಾ ಪರೀಕ್ಷೆ ನೆಟ್‌ನಲ್ಲಿ ಭಾರೀ ಅಕ್ರಮಗಳು ಪತ್ತೆಯಾದ ಬೆನ್ನಲ್ಲೇ ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದೆ. 

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ ಹಾಗೂ ಉಪನ್ಯಾಸಕರ ಅರ್ಹತಾ ಪರೀಕ್ಷೆ ನೆಟ್‌ನಲ್ಲಿ ಭಾರೀ ಅಕ್ರಮಗಳು ಪತ್ತೆಯಾದ ಬೆನ್ನಲ್ಲೇ ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ 1 ಕೋಟಿ ರು. ದಂಡ ಹಾಗೂ 10 ವರ್ಷಗಳ ಜೈಲುಶಿಕ್ಷೆ ವಿಧಿಸುವ ‘ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ಕಾಯ್ದೆ-2024’ಕ್ಕೆ ನಿಯಮಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ), ರೈಲ್ವೆ ಮಂಡಳಿ, ಬ್ಯಾಂಕಿಂಗ್‌ ಪರೀಕ್ಷೆಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಈ ನಿಯಮ ಅನ್ವಯಿಸಲಿದೆ. ಪ್ರಸ್ತುತ ಕಾಯ್ದೆಯನ್ನು ಸಂಸತ್ತು ಈ ವರ್ಷದ ಆರಂಭದಲ್ಲೇ ಅಂಗೀಕರಿಸಿತ್ತು ಹಾಗೂ ಫೆ.13ರಂದು ರಾಷ್ಟ್ರಪತಿಗಳ ಅಂಕಿತವೂ ಬಿದ್ದಿತ್ತು. ಅದರ ನಿಯಮಾವಳಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.ಹೊಸ ನಿಯಮಗಳು:

ನೂತನ ಕಾಯ್ದೆಯ ಪ್ರಕಾರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ, ಉತ್ತರ ಪತ್ರಿಕೆಗಳನ್ನು ತಿದ್ದುವ ಅಥವಾ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳನ್ನು ಎಸಗುವ ವ್ಯಕ್ತಿಗೆ ಕನಿಷ್ಠ ಮೂರು ವರ್ಷ ಹಾಗೂ ಗರಿಷ್ಠ ಐದು ವರ್ಷ ಜೈಲುಶಿಕ್ಷೆ ಮತ್ತು 10 ಲಕ್ಷ ರು.ವರೆಗೆ ದಂಡ ವಿಧಿಸಲಾಗುತ್ತದೆ.

ಎಲ್ಲಾ ರೀತಿಯ ಪರೀಕ್ಷಾ ಅಕ್ರಮಗಳನ್ನು ಜಾಮೀನುರಹಿತ ಅಪರಾಧ ಎಂದು ವರ್ಗೀಕರಿಸಲಾಗಿದ್ದು, ಪರೀಕ್ಷಾ ಅಕ್ರಮಗಳಲ್ಲಿ ತೊಡಗಿದವರನ್ನು ಯಾವುದೇ ವಾರಂಟ್‌ ಇಲ್ಲದೆ ಪೊಲೀಸರು ಬಂಧಿಸಬಹುದಾಗಿದೆ. ಅಲ್ಲದೆ ಅವರು ಜಾಮೀನಿಗೆ ತಕ್ಷಣ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಪರೀಕ್ಷೆ ನಡೆಸುವ ಸಂಸ್ಥೆಗಳ ಅಧಿಕಾರಿಗಳಿಗೆ ಅಕ್ರಮ ನಡೆದಿರುವುದು ತಿಳಿದಿದ್ದು, ಅವರು ಅದನ್ನು ವರದಿ ಮಾಡದೆ ಇದ್ದರೆ ಅಂತಹವರಿಗೆ 1 ಕೋಟಿ ರು. ದಂಡ ವಿಧಿಸಲಾಗುತ್ತದೆ. ಪರೀಕ್ಷಾ ಸಂಸ್ಥೆಗಳಲ್ಲಿರುವ ಹಿರಿಯ ಅಧಿಕಾರಿಗಳು ವ್ಯವಸ್ಥಿತವಾಗಿ ಅಕ್ರಮಗಳಲ್ಲಿ ತೊಡಗಿದರೆ ಕನಿಷ್ಠ ಮೂರು ವರ್ಷ ಹಾಗೂ ಗರಿಷ್ಠ 10 ವರ್ಷ ಜೈಲುಶಿಕ್ಷೆ ಹಾಗೂ 1 ಕೋಟಿ ರು.ವರೆಗೆ ದಂಡ ವಿಧಿಸಲಾಗುತ್ತದೆ.

ಅಕ್ರಮಗಳಲ್ಲಿ ಭಾಗಿಯಾಗುವ ಪರೀಕ್ಷಾ ಸಂಸ್ಥೆಗಳ ಅಧಿಕಾರಿಗಳಿಂದಲೇ ಪರೀಕ್ಷೆಯ ಖರ್ಚನ್ನು ವಸೂಲಿ ಮಾಡುವ ಹಾಗೂ ನಾಲ್ಕು ವರ್ಷಗಳ ಕಾಲ ಅವರು ಪರೀಕ್ಷಾ ಸಂಸ್ಥೆಗಳಲ್ಲಿ ಯಾವುದೇ ಅಧಿಕಾರ ಹೊಂದಿಲ್ಲದಂತೆ ಕ್ರಮ ಕೈಗೊಳ್ಳುವ ಅವಕಾಶ ಕಾಯ್ದೆಯಲ್ಲಿದೆ.

==

ನಿಯಮಗಳಲ್ಲಿ ಏನಿದೆ?1. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ವ್ಯಕ್ತಿಗೆ 3ರಿಂದ 5 ವರ್ಷ ಜೈಲು, 10 ಲಕ್ಷ ರು. ದಂಡ2. ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವುದು ಗೊತ್ತಿದ್ದರೂ ತಿಳಿಸದ ಅಧಿಕಾರಿಗೆ 5ರಿಂದ 10 ವರ್ಷ ಜೈಲು, 1 ಕೋಟಿ ರು. ದಂಡ3. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳು ಜಾಮೀನುರಹಿತ ಅಪರಾಧ4. ಅಕ್ರಮಗಳಲ್ಲಿ ಭಾಗಿಯಾದ ಅಧಿಕಾರಿಗಳಿಂದಲೇ ಪರೀಕ್ಷೆಯ ಖರ್ಚು ವಸೂಲಿ5. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ 4 ವರ್ಷ ಪರೀಕ್ಷೆಯ ಡ್ಯೂಟಿ ಇಲ್ಲ

==

ಡ್ಯಾಮೇಜ್‌ ಕಂಟ್ರೋಲ್‌ಗೆ ಕೇಂದ್ರದ ಯತ್ನ: ಕಾಂಗ್ರೆಸ್‌

 ನವದೆಹಲಿ ;  ಪರೀಕ್ಷಾ ಅಕ್ರಮಗಳಿಗೆ ಶಿಕ್ಷೆ ವಿಧಿಸುವ ಕಾಯ್ದೆ ಸಾಕಷ್ಟು ಹಿಂದೆಯೇ ಅಂಗೀಕಾರವಾಗಿದ್ದರೂ ಈಗ ಅದರ ಕುರಿತು ಅಧಿಸೂಚನೆ ಪ್ರಕಟಿಸುವ ಮೂಲಕ ನೀಟ್‌ ಹಾಗೂ ನೆಟ್‌ ಪರೀಕ್ಷೆಯ ಹಗರಣಗಳಿಂದ ಉಂಟಾದ ‘ಡ್ಯಾಮೇಜ್‌ ಕಂಟ್ರೋಲ್‌’ ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಪಕ್ಷ ಟೀಕಿಸಿದೆ.‘ಇಂತಹ ಕಾಯ್ದೆ ಬೇಕಿತ್ತು. ಆದರೆ ಇದು ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇನ್ನಿತರ ಅಕ್ರಮಗಳು ನಡೆದ ಮೇಲೆ ಅವುಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದೇ ಹೊರತು ಪರೀಕ್ಷಾ ಅಕ್ರಮಗಳನ್ನು ತಡೆಯುವ ಸ್ವರೂಪದಲ್ಲಿ ಇಲ್ಲ’ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಸಾರ್ವಜನಿಕ ಪರೀಕ್ಷೆಗಳು-2024’ ಕಾಯ್ದೆಗೆ ಫೆ.13ರಂದೇ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಶುಕ್ರವಾರ ಅದರ ಅಧಿಸೂಚನೆ ಪ್ರಕಟಿಸಲಾಗಿದೆ. ಖಂಡಿತ ಇದು ಡ್ಯಾಮೇಜ್‌ ಕಂಟ್ರೋಲ್‌ ಯತ್ನವಷ್ಟೆ’ ಎಂದು ಅವರು ಆರೋಪಿಸಿದ್ದಾರೆ.