ಸಾರಾಂಶ
ಅಸಂಘಟಿತ ವಲಯದವರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಅನ್ವಯವಾಗುವಂತೆ ‘ಸಾರ್ವತ್ರಿಕ ಪಿಂಚಣಿ ಯೋಜನೆ’ಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.
ನವದೆಹಲಿ: ಅಸಂಘಟಿತ ವಲಯದವರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಅನ್ವಯವಾಗುವಂತೆ ‘ಸಾರ್ವತ್ರಿಕ ಪಿಂಚಣಿ ಯೋಜನೆ’ಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಪ್ರಸ್ತುತ, ಕಟ್ಟಡ ನಿರ್ಮಾಣಗಾರರು, ಮನೆಕೆಲಸಗಾರರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ದೊಡ್ಡ ಉಳಿತಾಯ ಯೋಜನೆಗಳಿಂದ ಲಾಭವಾಗುತ್ತಿಲ್ಲ. ಹಾಗಾಗಿ ಇವರನ್ನೂ ಒಳಗೊಂಡಂತೆ ಹೊಸ ಯೋಜನೆ ಜಾರಿಗೆ ಮೋದಿ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಸಾರ್ವತ್ರಿಕ ಪಿಂಚಣಿ ಯೋಜನೆಯಡಿ ಜನ ಸ್ವಯಂಪ್ರೇರಿತರಾಗಿ ಉಳಿತಾಯ ಮಾಡಬಹುದಾಗಿದೆ. ಇದಕ್ಕೆ ಸರ್ಕಾರ ತನ್ನ ಯಾವುದೇ ಪಾಲು ನೀಡುವುದಿಲ್ಲ. ಜನರು ಪಾವತಿ ಮಾಡಿದ ಹಣಕ್ಕೆ ಅನುಗುಣವಾಗಿ ಅವರಿಗೆ ನಿವೃತ್ತ ವಯಸ್ಸಿನಲ್ಲಿ ಪಿಂಚಣಿ ಹಣ ಸಿಗಲಿದೆ. ದೇಶದ ಪ್ರತಿ ಪ್ರಜೆಗೂ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.‘ಹೊಸ ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಕೆಲವು ಯೋಜನೆಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದೆ. ಯೋಜನಾ ಪ್ರಸ್ತಾವನೆ ಪೂರ್ಣಗೊಂಡ ನಂತರ, ಸಂಬಂಧಪಟ್ಟವರ ಜೊತೆ ಸಮಾಲೋಚಿಸಿ ಜಾರಿಗೆ ತರಲಾಗುವುದು’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ ಮೊದಲಾದವನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಯಾವೆಲ್ಲ ಹಳೆಯ ಯೋಜನೆಗಳನ್ನು ವಿಲೀನಗೊಳಿಸಲಾಗುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ.