ಸಾರಾಂಶ
ಕೇರಳದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕನಿಗೆ ನಿಫಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ.
ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕನಿಗೆ ನಿಫಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕನಲ್ಲಿ ನಿಫಾ ಸೋಂಕು ಕಾಣಿಕೊಂಡಿದೆ ಎಂದು ಪುಣೆ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ದೃಢೀಕರಿಸಿದೆ. ಆ ಬಾಲಕನನ್ನು ಸಧ್ಯಕ್ಕೆ ಕಲ್ಲಿಕೋಟೆಯ ಸರ್ಕಾರಿ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಆತನನ್ನು ಐಸೋಲೆಟ್ ಮಾಡಲಾಗಿದೆ. ಸೋಂಕಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಈಗಾಗಲೇ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆ ಆವರಣದಲ್ಲಿ ಹಾಗೂ ರೋಗಿಗಳನ್ನು ಭೇಟಿ ಮಾಡಲು ಆಸ್ಪತ್ರೆಗಳಿಗೆ ಹೋಗುವವರು ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಎಚ್ಚರಿಸಿದ್ದಾರೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ 2018, 2021 ಹಾಗೂ 2023ರಲ್ಲಿ ಹಾಗೂ ಎರ್ನಾಕುಲಂ ಜಿಲ್ಲೆಯಲ್ಲಿ 2019ರಲ್ಲಿ ನಿಫಾ ಸೋಂಕು ವರದಿಯಾಗಿತ್ತು.
ಪ್ರಸ್ತುತ ಕಲ್ಲಿಕೋಟೆ, ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳ ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಗಿದೆ.