ಚಾಲಕನಿಲ್ಲದೆ ಜಮ್ಮುವಿಂದ ಪಂಜಾಬ್‌ಗೆ ಓಡಿದ ರೈಲು!

| Published : Feb 26 2024, 01:32 AM IST / Updated: Feb 26 2024, 07:52 AM IST

ಚಾಲಕನಿಲ್ಲದೆ ಜಮ್ಮುವಿಂದ ಪಂಜಾಬ್‌ಗೆ ಓಡಿದ ರೈಲು!
Share this Article
  • FB
  • TW
  • Linkdin
  • Email

ಸಾರಾಂಶ

ರೈಲು ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೆ ರೈಲಿನಿಂದ ಕೆಳಗಿಳಿದ ಪರಿಣಾಮ ಗೂಡ್ಸ್‌ ರೈಲೊಂದು ಯಾವುದೇ ಚಾಲಕನಿಲ್ಲದೆ ತಂತಾನೇ ಬರೋಬ್ಬರಿ 70 ಕಿ.ಮೀ. ದೂರ ಚಲಿಸಿದ ಅಚ್ಚರಿಯ ಘಟನೆ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ನಡೆದಿದೆ.

ಜಮ್ಮು/ಚಂಡೀಗಢ: ರೈಲು ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೆ ರೈಲಿನಿಂದ ಕೆಳಗಿಳಿದ ಪರಿಣಾಮ ಗೂಡ್ಸ್‌ ರೈಲೊಂದು ಯಾವುದೇ ಚಾಲಕನಿಲ್ಲದೆ ತಂತಾನೇ ಬರೋಬ್ಬರಿ 70 ಕಿ.ಮೀ. ದೂರ ಚಲಿಸಿದ ಅಚ್ಚರಿಯ ಘಟನೆ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ನಡೆದಿದೆ. ಕೊನೆಗೆ ಮರಳು ಚೀಲ ಇಟ್ಟು ರೈಲು ನಿಲ್ಲಿಸಲಾಗಿದೆ.

ಜಮ್ಮುವಿನಿಂದ ಪಂಜಾಬ್‌ಗೆ ತೆರಳುತ್ತಿದ್ದ ಸುಮಾರು 53 ವ್ಯಾಗನ್‌ಗಳಿದ್ದ ರೈಲು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಿದೆ. ರೈಲು ತಂತಾನೇ ಚಲಿಸುತ್ತಿರುವುದು ಕೂಡಲೇ ಅಧಿಕಾರಿಗಳ ಗಮನಕ್ಕೆ ಬಂದಿದೆಯಾದರೂ ಅಷ್ಟು ವೇಗವಾಗಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸುವುದು ಭಾರೀ ಸವಾಲಿನ ಕೆಲಸವಾಗಿತ್ತು. 

ಕೊನೆಗೆ ರೈಲು 70 ಕಿ.ಮೀ. ಕ್ರಮಿಸಿದ ಬಳಿಕ ಹಳಿಯಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ. ತನ್ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಿದ್ದೇನು?
ಜಮ್ಮುವಿನಿಂದ ಪಂಜಾಬ್‌ಗೆ ಚಲಿಸುತ್ತಿದ್ದ ಈ ಗೂಡ್ಸ್‌ ರೈಲು, ಚಾಲಕನ ಬದಲಾವಣೆಗಾಗಿ ಜಮ್ಮುವಿನ ಕಠುವಾ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 7.25ರ ಸುಮಾರಿಗೆ ನಿಂತಿತ್ತು. ರೈಲು ನಿಲ್ಲಿಸಿದ ಚಾಲಕ ಅದರಿಂದ ಕೆಳಗಿಳಿವ ವೇಳೆಗೆ ಹ್ಯಾಂಡ್‌ ಬ್ರೇಕ್‌ ಹಾಕಲು ಮರೆತುಬಿಟ್ಟಿದ್ದಾನೆ.

ಹೀಗಾಗಿ ಇಳಿಜಾರಿದ್ದ ಕಾರಣ ರೈಲು ಚಲಿಸಲು ಪ್ರಾರಂಭಿಸಿದೆ. ಈ ವೇಳೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಯಾರೂ ಕೂಡ ರೈಲಿನಲ್ಲಿ ಇರಲಿಲ್ಲ. 

ಬಳಿಕ 9 ಗಂಟೆ ವೇಳೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ. ಚಾಲಕನಿಲ್ಲದೇ ರೈಲು ಓಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಘಟನೆ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.