ನೀಟ್‌ ಗ್ರೇಸ್‌ ಅಂಕಕ್ಕೆ ಆಧಾರವಿತ್ತು: ಪ್ರಧಾನ್‌ ಸಮರ್ಥನೆ

| Published : Jun 14 2024, 01:06 AM IST / Updated: Jun 14 2024, 04:39 AM IST

ಸಾರಾಂಶ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯಲ್ಲಿ ಪೇಪರ್ ಸೋರಿಕೆ ಆರೋಪವನ್ನು ಗುರುವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಳ್ಳಿಹಾಕಿದ್ದಾರೆ.

 ನವದೆಹಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯಲ್ಲಿ ಪೇಪರ್ ಸೋರಿಕೆ ಆರೋಪವನ್ನು ಗುರುವಾರ ತಳ್ಳಿಹಾಕಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ಆರೋಪಗಳನ್ನು ರುಜುವಾತುಪಡಿಸಲು ಯಾವುದೇ ಪುರಾವೆಗಳಿಲ್ಲ ಮತ್ತು ಯಾವುದೇ ವಿದ್ಯಾರ್ಥಿಗೂ ಅನಾನುಕೂಲತೆ ಆಗದಂತೆ ಸರ್ಕಾರ ನೋಡಿಕೊಳ್ಳುವುದು ಎಂದು ಹೇಳಿದ್ದಾರೆ. 

ಅಲ್ಲದೆ, ‘ಗ್ರೇಸ್‌ ಅಂಕ ನೀಡಿಕೆಗೆ ಒಂದು ಆಧಾರವಿತ್ತು. ಆದರೆ ಅದರಲ್ಲೂ ವ್ಯತ್ಯಾಸವಾದಲ್ಲಿ ಸರಿಪಡಿಸಲಾಗುವುದು’ ಎಂದಿದ್ದಾರೆ.ಪೇಪರ್‌ ಸೋರಿಕೆ ಆರೋಪ ಹಾಗೂ ಗ್ರೇಸ್‌ ಅಂಕ ವಿವಾದದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೇಪರ್ ಸೋರಿಕೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಎನ್‌ಟಿಎ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಆಧಾರರಹಿತವಾಗಿದೆ, ಇದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತದೆ. ಜೊತೆಗೆ ಉನ್ನತ ಶಿಕ್ಷಣ ಮಟ್ಟದಲ್ಲಿ ಪರೀಕ್ಷೆ ನಡೆಸುತ್ತದೆ’ ಎಂದರು.

ಇನ್ನು ಗ್ರೇಸ್ ಅಂಕದ ಬಗ್ಗೆ ಮಾತನಾಡಿದ ಅವರು, ‘ಗ್ರೇಸ್‌ ಅಂಕಗಳನ್ನು ಎನ್‌ಟಿಎ ಏನೂ ಮನಬಂದಂತೆ ನೀಡಿಲ್ಲ. ಸುಪ್ರೀಂ ಕೋರ್ಟ್ ಸೂತ್ರವನ್ನು ಆಧರಿಸಿ ಲೆಕ್ಕಾಚಅರ ಮಾಡಿ ಅಂಕ ನೀಡಿದೆ. ಆ ಅಂಕ ನೀಡಿಕೆಗೂ ಒಂದು ಆಧಾರವಿದೆ. ಆದರೆ ಅದರಲ್ಲೂ ಕೆಲವು ವ್ಯತ್ಯಾಸ ಆದಲ್ಲಿ ಅವನ್ನು ಸರಿಪಡಿಸಲಾಗುವುದು ಮತ್ತು ಯಾವುದೇ ವಿದ್ಯಾರ್ಥಿಗೆ ಅನಾನುಕೂಲ ಆಗದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದರು.

ನೀಟ್ ಟಾಪರ್‌ಗಳ ಸಂಖ್ಯೆ 67ರಿಂದ 61ಕ್ಕೆ ಇಳಿಕೆ

ನವದೆಹಲಿ: ನೀಟ್‌ ಪರೀಕ್ಷೆಯಲ್ಲಿ ನೀಡಿದ್ದ ಕೃಪಾಂಕ ರದ್ದಪಡಿಸುವ ಕೇಂದ್ರ ಸರ್ಕಾರ ನಿರ್ಧಾರದಿಂದಾಗಿ ನೀಟ್‌ನಲ್ಲಿ ಟಾಪರ್‌ಗಳ ಸಂಖ್ಯೆ 67ರಿಂದ 61ಕ್ಕೆ ಇಳಿಯಲಿದೆ. ಕಾರಣ 6 ಜನರು ಕೃಪಾಂಕದ ಕಾರಣ 720ಕ್ಕೆ 720 ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದರು. ಈ ಎಲ್ಲಾ 6 ಜನರೂ ಹರ್ಯಾಣದ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು. ಅವರ ಕ್ರಮ ಸಂಖ್ಯೆ ಕೂಡಾ ಅನುಕ್ರಮವಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.