ಸಾರಾಂಶ
ದೇಶದಲ್ಲಿ ಇಲ್ಲಿಯವರೆಗೆ ಅಧಿಕಾರ ನಡೆಸಿದ ಯಾವ ಪ್ರಧಾನಿಯೂ ಈ ರೀತಿ ದ್ವೇಷ ಪೂರಿತ ಮಾತುಗಳನ್ನಾಡಿರಲಿಲ್ಲ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಾಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿನ ದಿನಗಳಲ್ಲಿ ದ್ವೇಷಪೂರಿತ ಭಾಷೆ ಬಳಸಿ ವಿಪಕ್ಷ ಹಾಗೂ ಸಮಾಜದ ನಿರ್ದಿಷ್ಟ ಸಮುದಾಯ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ಅಧಿಕಾರ ನಡೆಸಿದ ಯಾವ ಪ್ರಧಾನಿಯೂ ಈ ರೀತಿ ದ್ವೇಷ ಪೂರಿತ ಮಾತುಗಳನ್ನಾಡಿರಲಿಲ್ಲ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಾಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯ ಕಡೆಯ ಹಂತದಲ್ಲಿ ತಮ್ಮ ತವರು ರಾಜ್ಯ ಪಂಜಾಬ್‌ನಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮನಮೋಹನ್ ಸಿಂಗ್, ‘ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಕೆಟ್ಟ ರೂಪದಲ್ಲಿ ದ್ವೇಷಪೂರಿತ ಭಾಷಣದಲ್ಲಿ ತೊಡಗಿಕೊಂಡಿದ್ದಾರೆ. ಸಾರ್ವಜನಿಕ ಭಾಷಣದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಅದು ವಿಭಜನೆಯ ಸ್ವಭಾವವಾಗಿದೆ. ಇಲ್ಲಿಯವರೆಗೆ ಯಾವ ಪ್ರಧಾನಿಯೂ ಇಂತಹ ಅಸಂಸದೀಯ, ದ್ವೇಷಪೂರಿತ ಮಾತುಗಳನ್ನು ಆಡಿರಲಿಲ್ಲ. ಸಮಾಜದ ನಿರ್ದಿಷ್ಟ ವರ್ಗ ಮತ್ತು ವಿರೋಧಿಗಳನ್ನು ಗುರಿಯಾಗಿಸಿಕೊಂಡು ಮೋದಿ ಈ ರೀತಿಯ ಪದಗಳನ್ನು ಬಳಸುತ್ತಿದ್ದಾರೆ’ ಎಂದು ಮೋದಿ ವಿರುದ್ಧ ಸಿಂಗ್ ಕಿಡಿಕಾರಿದರು.
ಅಲ್ಲದೆ, ‘ನಿರಂಕುಶ ಆಡಳಿತದಿಂದ ದೇಶ ರಕ್ಷಿಸಿ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನವನ್ನು ನಿರಂಕುಶ ಆಡಳಿತದಿಂದ ಪುನಾರವರ್ತನೆಗೊಳ್ಳದಂತೆ ತಡೆಯಲು ಒಂದು ಅವಕಾಶವಿದೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಮನ ನೀಡುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.