‘ಹಿಂದುಳಿದ ವರ್ಗಗಳಿಗೆ ಸೇರಿದ ಹಿಂದೂಗಳು ಇಸ್ಲಾಂಗೆ ಮತಾಂತರಗೊಂಡ ನಂತರ, ತಾವು ಸೇರಿದ ಹಿಂದಿನ ವರ್ಗದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅರ್ಹರಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ನವದೆಹಲಿ : ‘ಹಿಂದುಳಿದ ವರ್ಗಗಳಿಗೆ ಸೇರಿದ ಹಿಂದೂಗಳು ಇಸ್ಲಾಂಗೆ ಮತಾಂತರಗೊಂಡ ನಂತರ, ತಾವು ಸೇರಿದ ಹಿಂದಿನ ವರ್ಗದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅರ್ಹರಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಕೋರ್ಟ್ ಈ ಅಭಿಪ್ರಾಯ ಹೇಳಿತ್ತು. ಇದೀಗ ತೀರ್ಪಿನ ಮೂಲಕವೇ ಅದನ್ನು ಎತ್ತಿ ಹಿಡಿದಿದೆ,
‘ಹಿಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನುಭವಿಸಿದ ಹಿಂದುಳಿದಿರುವಿಕೆಯನ್ನು ಮತಾಂತರದ ನಂತರವೂ ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಹಿಂದು, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯರೆಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
‘ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಇಸ್ಲಾಂಗೆ ಮತಾಂತರಗೊಂಡ ನಂತರ ಮೀಸಲಾತಿ ಪಡೆಯುವಂತಿಲ್ಲ’ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾ. ಚಂದ್ರಶೇಖರ್ ಅವರ ಪೀಠ ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.
ಸಂವಿಧಾನದ 16(4)ನೇ ವಿಧಿ ಉಲ್ಲೇಖ:
‘ಹಿಂದು, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯನೆಂದು ಪರಿಗಣಿಸಲು ಸಾಧ್ಯವಿಲ್ಲ. ಬೇರೆ ಧರ್ಮಕ್ಕೆ ಮತಾಂತರಗೊಂಡಾಗ, ಅಂತಹ ವ್ಯಕ್ತಿಯು ತನ್ನ ಹಿಂದಿನ ಜಾತಿಯೊಂದಿಗೆ ಸಂಬಂಧ ಹೊಂದಿದ್ದ ‘ಪರಿಶಿಷ್ಟ ಜಾತಿ’ಯ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ. ಅಲ್ಲದೆ, ಸಂವಿಧಾನದ 16(4)ನೇ ವಿಧಿಯ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ದೊರೆಯುವ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆಯಲು ಆತ ಅರ್ಹನಾಗುವುದಿಲ್ಲ. ಏಕೆಂದರೆ, ಈ ಸೌಲಭ್ಯಗಳು ಆ ವ್ಯಕ್ತಿಯು ಪರಿಶಿಷ್ಟ ಜಾತಿಗೆ ಸೇರಿದವನಾಗಿರುವುದರ ಮೇಲೆ ಆಧರಿತವಾಗಿರುತ್ತವೆ’ ಎಂದು ಪೀಠ ಸ್ಪಷ್ಟಪಡಿಸಿದೆ.
‘ಒಬ್ಬ ವ್ಯಕ್ತಿಯು ಮತಾಂತರಗೊಳ್ಳುವ ಮೊದಲು ಹೊಂದಿದ್ದ ಜಾತಿ ಅಥವಾ ಸಮುದಾಯದ ಸ್ಥಾನಮಾನವನ್ನು, ಕೇವಲ ಮತಾಂತರಗೊಂಡ ಕಾರಣದಿಂದಾಗಿ, ಮತಾಂತರದ ನಂತರದ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅಧಿಸೂಚಿತ ಹಿಂದುಳಿದ ವರ್ಗದ ಸಮುದಾಯದ ಸದಸ್ಯತ್ವವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಮತಾಂತರಗೊಳ್ಳುವ ಮೊದಲು ಹೊಂದಿದ್ದ ಹಿಂದುಳಿದಿರುವಿಕೆಯು, ಮತಾಂತರದ ನಂತರ ಆತನಿಗೆ ಬೇರೊಂದು ಅಧಿಸೂಚಿತ ಹಿಂದುಳಿದ ವರ್ಗದ ಸಮುದಾಯದ ಸದಸ್ಯತ್ವವನ್ನು ನೀಡಲು ಏಕೈಕ ಕಾನೂನು ಆಧಾರವಾಗಲಾರದು’ ಎಂದು ತಿಳಿಸಿದೆ.
ಘರ್ ವಾಪ್ಸಿ ಬಗ್ಗೆ ಸ್ಪಷ್ಟನೆ:
‘ಒಬ್ಬ ವ್ಯಕ್ತಿಯು ಹಿಂದೂ ಸಾಮಾಜಿಕ ವ್ಯವಸ್ಥೆಯಿಂದ ಹಿಂದೂಯೇತರ ಸಾಮಾಜಿಕ ವ್ಯವಸ್ಥೆಗೆ ಮತಾಂತರಗೊಂಡ ನಂತರ, ಪುನಃ ಹಿಂದೂ ಸಾಮಾಜಿಕ ವ್ಯವಸ್ಥೆಗೆ ಮರಳಿದ ಸಂದರ್ಭದಲ್ಲಿ (ಘರ್ ವಾಪ್ಸಿ), ಸಂವಿಧಾನದ 16(4)ನೇ ವಿಧಿಯ ಅಡಿಯಲ್ಲಿ ಆ ವ್ಯಕ್ತಿಗೆ ವಿಶೇಷ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆಯೇ ಎಂಬುದನ್ನು, ಕೇವಲ ಆತನ ಹಿಂದಿನ ಸ್ಥಿತಿಯನ್ನು ಆಧರಿಸಿ ನಿರ್ಧರಿಸಲು ಸಾಧ್ಯವಿಲ್ಲ. ಅಂತಹ ಅರ್ಹತೆಗೆ, ಘರ್ ವಾಪ್ಸಿ ಆದ ನಂತರ ಆತ ತನ್ನ ಮೂಲ ಜಾತಿಯನ್ನು ಒಪ್ಪಿಕೊಂಡಿದ್ದಾನೋ ಇಲ್ಲವೋ ಎಂಬುದರ ಕುರಿತು ಸಕ್ಷಮ ಪ್ರಾಧಿಕಾರದಿಂದ ದೃಢೀಕರಣದ ಅಗತ್ಯವಿರುತ್ತದೆ’ ಎಂದು ತಿಳಿಸಿದೆ.
ಹೈಕೋರ್ಟ್ ತೀರ್ಪಿಗೆ ಅನುಮೋದನೆ:
‘ಆದ್ದರಿಂದ, ನಾವು ಹೈಕೋರ್ಟ್ನ ತೀರ್ಮಾನವನ್ನು ಅನುಮೋದಿಸುತ್ತೇವೆ. ಇಸ್ಲಾಂಗೆ ಮತಾಂತರಗೊಳ್ಳುವ ವ್ಯಕ್ತಿಯೊಬ್ಬ, ಕೇವಲ ಆ ಕಾರಣದಿಂದಲೇ ರಾಜ್ಯದಲ್ಲಿ ಗುರುತಿಸಲಾದ 7 ಹಿಂದುಳಿದ ಸಮುದಾಯಗಳ ಪೈಕಿ ಒಂದರ ಸದಸ್ಯನಾಗಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಹಿಂದಿನ ಜಾತಿ ಅಥವಾ ಸಮುದಾಯದ ಸ್ಥಿತಿಯನ್ನು ಸ್ವಯಂಚಾಲಿತವಾಗಿ ಮುಸ್ಲಿಂ ಹಿಂದುಳಿದ ವರ್ಗಗಳ ವರ್ಗಕ್ಕೆ ವರ್ಗಾಯಿಸಲು ಬರುವುದಿಲ್ಲ. ಅಲ್ಲದೆ, ಯಾವುದೇ ಖಾಸಗಿ ಧಾರ್ಮಿಕ ಸಂಸ್ಥೆಯು ಇಂತಹ ಶಾಸನಬದ್ಧ ಹಕ್ಕನ್ನು ನಿರ್ಣಾಯಕವಾಗಿ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಅಂತಿಮ ಸುಪ್ರೀಂ ಅಂತಿಮ ತೀರ್ಪು ನೀಡಿದೆ.
ಬಿಜೆಪಿ ಸ್ವಾಗತ:
ತೀರ್ಪನ್ನು ‘ಐತಿಹಾಸಿಕ’ ಎಂದು ಬಿಜೆಪಿ ಗುರುವಾರ ಶ್ಲಾಘಿಸಿದೆ ಮತ್ತು ಈ ತೀರ್ಪು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ‘ತುಷ್ಟೀಕರಣ ರಾಜಕೀಯಕ್ಕೆ ಭಾರಿ ಹೊಡೆತ’ ಎಂದು ಪ್ರತಿಪಾದಿಸಿದೆ.

