ಕ್ವಾಂಟಂ ಮೆಕ್ಯಾನಿಕ್ಸ್‌ ಸಂಶೋಧಕರಿಗೆ ಭೌತಶಾಸ್ತ್ರ ನೊಬೆಲ್‌

| Published : Oct 08 2025, 01:00 AM IST

ಕ್ವಾಂಟಂ ಮೆಕ್ಯಾನಿಕ್ಸ್‌ ಸಂಶೋಧಕರಿಗೆ ಭೌತಶಾಸ್ತ್ರ ನೊಬೆಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ವಾಂಟಂ ಮೆಕ್ಯಾನಿಕ್ಸ್‌ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಗಾಗಿ ಅಮೆರಿಕದ ಮೂರು ವಿಜ್ಞಾನಿಗಳಿಗೆ ಮಂಗಳವಾರ ಭೌತಶಾಸ್ತ್ರ ನೊಬೆಲ್‌ ಪ್ರಕಟಿಸಲಾಗಿದೆ.

ಕ್ವಾಂಟಮ್ ಟನಲ್, ಶಕ್ತಿಯ ಪ್ರಮಾಣೀಕರಣ ಪ್ರಕ್ರಿಯೆ ಪತ್ತೆ

ಅಮೆರಿಕದ 3 ಸಂಶೋಧಕರ ಸಾಧನೆಗೆ ನೊಬೆಲ್‌ ಪ್ರಶಸ್ತಿಸ್ಟಾಕ್‌ಹೋಮ್‌: ಕ್ವಾಂಟಂ ಮೆಕ್ಯಾನಿಕ್ಸ್‌ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಗಾಗಿ ಅಮೆರಿಕದ ಮೂರು ವಿಜ್ಞಾನಿಗಳಿಗೆ ಮಂಗಳವಾರ ಭೌತಶಾಸ್ತ್ರ ನೊಬೆಲ್‌ ಪ್ರಕಟಿಸಲಾಗಿದೆ.

ಜಾನ್ ಕ್ಲಾರ್ಕ್, ಮೈಕೆಲ್ ಎಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಈ ಪ್ರಶಸ್ತಿಗೆ ಭಾಜನರಾದವರು. ವಿದ್ಯುತ್ ಸರ್ಕ್ಯೂಟ್‌ನಲ್ಲಿ ಪ್ರತಿರೋಧಕದ ನಡುವೆಯೂ ಕಣಗಳ ಚಲನೆಯನ್ನು ದೃಢೀಕರಿಸುವ ಕ್ವಾಂಟಮ್ ಟನಲಿಂಗ್‌ ಪ್ರಕ್ರಿಯೆ ಮತ್ತು ಶಕ್ತಿಯ ಪ್ರಮಾಣೀಕರಣ ಕುರಿತ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ಬಂದಿದೆ. ಕ್ಲಾರ್ಕ್ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯಲ್ಲಿ, ಮಾರ್ಟಿನಿಸ್ ಸಾಂಟಾ ಬಾರ್ಬರಾದಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯಲ್ಲಿ, ಡೆವೊರೆಟ್ ಯಾಲೆ ಹಾಗೂ ಸಾಂಟಾ ಬಾರ್ಬರಾದಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯಲ್ಲಿ ತಮ್ಮ ಸಂಶೋಧನೆಗಳನ್ನು ಕೈಗೊಂಡಿದ್ದರು.

ಏನಿದು ಸಂಶೋಧನೆ?:

ಸಾಮಾನ್ಯವಾಗಿ ಎಲೆಕ್ಟ್ರಿಕ್‌ ಸರ್ಕಿಟ್‌(ವಯರ್‌ನಿಂದ ಮಾಡಲಾದ ವೃತ್ತ)ನಲ್ಲಿ ತಡೆಗಳನ್ನು ಒಡ್ಡದ ಹೊರತು ವಿದ್ಯುತ್‌ ಸರಾಗವಾಗಿ ಹರಿಯುತ್ತವೆ. ಒಂದೊಮ್ಮೆ ಸರ್ಕಿಟ್‌ನ ನಡುವೆ ಪ್ರತಿರೋಧಕಗಳನ್ನು ಅಳವಡಿಸಿದರೆ, ಹರಿಯುತ್ತಿದ್ದ ಎಲೆಕ್ಟ್ರಾನ್‌ಗಳ ಚಲನೆ ನಿಲ್ಲುವುದು ಸ್ವಾಭಾವಿಕ. ಆದರೆ ಕೆಲವೊಮ್ಮೆ ಆ ತಡೆಗಳನ್ನೂ ಭೇದಿಸಿ ಕೆಲ ಎಲೆಕ್ಟ್ರಾನ್‌ ಕಣಗಳು ಸರ್ಕಿಟ್‌ನಲ್ಲಿ ಮುಂದೆ ಸಾಗುತ್ತವೆ. ಈ ಪ್ರಕ್ರಿಯೆಯನ್ನು ಕ್ವಾಂಟಂ ಮೆಕ್ಯಾನಿಕಲ್‌ ಟನಲಿಂಗ್‌ ಎನ್ನಲಾಗುತ್ತದೆ.

ಈ ಪ್ರಕ್ರಿಯೆಯನ್ನು ಸ್ಥಾಪಿಸಲು ಕ್ಲಾರ್ಕ್, ಮಾರ್ಟಿನಿಸ್, ಡೆವೊರೆಟ್ ಸರ್ಕಿಟ್‌ ಒಂದನ್ನು ತಯಾರಿಸಿ, ಅದರ ನಡುವೆ ತೆಳುವಾದ ಅರೆ-ವಾಹಕಗಳನ್ನು ಅಳವಡಿಸಿದರು. ಬಳಿಕ ಅದರಲ್ಲಿ ವಿದ್ಯುತ್‌ ಹರಿಸಿದಾಗ, ಕೆಲ ಎಲೆಕ್ಟ್ರಾನ್‌ಗಳು ತಡೆಗಳನ್ನು ದಾಟಿ ಮುಂದುವರೆದವು. ಇದನ್ನು ಸಂಶೋಧಿಸಿದ್ದಕ್ಕಾಗಿ ಅವರಿಗೆ ನೊಬೆಲ್‌ ಲಭಿಸಿದೆ. ಮೈಕ್ರೋಸ್ಕೋಪ್‌, ಡೇಟಾ ಸಂಗ್ರಹಿಸುವ ಫ್ಲಾಶ್ ಮೆಮೊರಿ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಕ್ವಾಂಟಮ್ ಟನಲಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಸೋಮವಾರ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯ ಸಂಶೋಧನೆಗಾಗಿ ಮೇರಿ, ಫ್ರೆಡ್‌ ಮತ್ತು ಸಿಮೋನ್‌ರಿಗೆ ವೈದ್ಯಕೀಯ ನೊಬೆಲ್‌ ನೀಡಲಾಗಿತ್ತು. ಒಂದು ವಾರ ನಿರಂತರವಾಗಿ ಘೋಷಣೆ ಆಗಲಿರುವ ಪ್ರಶಸ್ತಿಗಳನ್ನು, ಆರ್ಫ್ರೆಡ್‌ ನೊಬೆಲ್‌ ಅವರು ಮರಣಿಸಿದ ದಿನವಾದ ಡಿ.10ರಂದು ಪ್ರದಾನ ಮಾಡಲಾಗುವುದು. ==

ಇಂದು ಕೆಮಿಸ್ಟ್ರಿ ನೊಬೆಲ್‌ ಪ್ರಕಟಬುಧವಾರ ರಸಾಯನಶಾಸ್ತ್ರ ವಿಭಾಗದಲ್ಲಿ ಗಮನಾರ್ಹ ಸಾಧನೆಗೈದವರಿಗೆ ನೊಬೆಲ್‌ ಘೋಷಿಸಲಾಗುವುದು. ಅ.6ರಿಂದ ಆರಂಭವಾಗಿರುವ ನೊಬೆಲ್‌ ಘೋಷಣೆ ಕಾರ್ಯಕ್ರಮ ಅ.13ರ ವರೆಗೆ ನಡೆಯಲಿದೆ.