ಸಾರಾಂಶ
ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಎನ್‌ಡಿಎ ಒಮ್ಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸವಿದೆ. ಒಂದು ವೇಳೆ ಆಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಎನ್‌ಡಿಎ ಸೇರುವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸೋಮವಾರ ಪಕ್ಷದ ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳುವ ಮೊದಲು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಪಚುನಾವಣೆಗೆ ನಾನು ಸಹ ಒಬ್ಬ ಪ್ರಬಲ ಆಕಾಂಕ್ಷಿ. ಎಚ್.ಡಿ.ಕುಮಾರಸ್ವಾಮಿ ಮತ್ತು ನಾನು ರಾಜಕೀಯವಾಗಿ ಪರಸ್ಪರ ವಿರೋಧಿಯಾಗಿದ್ದೆವು. ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದರು. ಅವರಿಗೆ ಸಮೀಪದ ಪ್ರತಿಸ್ಪರ್ಧಿ ನಾನೇ. ಹೀಗಾಗಿ ಅವರಿಂದ ತೆರವಾದ ಮೇಲೆ ನನಗೆ ಬಿಟ್ಟುಕೊಡಬೇಕು ಎಂಬುದು ನನ್ನ ವಾದ ಎಂದರು.ಕುಮಾರಸ್ವಾಮಿ ಮತ್ತು ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡಲಿದ್ದಾರೆ ನೋಡೋಣ.
ಉಪಚುನಾವಣೆ ಸಮೀಪಿಸುತ್ತಿದೆ. ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು. ಕಾಂಗ್ರೆಸ್ ಸಹ ತುಂಬಾ ಚಟುವಟಿಕೆಯಿಂದ ಇದೆ. ಡಿ.ಕೆ.ಶಿವಕುಮಾರ್ ಅವರು ಆ.15ರಂದು ಚನ್ನಪಟ್ಟಣಕ್ಕೆ ಬಂದು ರಾಷ್ಟ್ರಧ್ವಜ ಅನಾವರಣ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ಸ್ಪರ್ಧಿಸುವ ಬಗ್ಗೆ ಸಂದೇಶ ಕಳುಹಿಸಿದ್ದಾರೆ. ಇದನ್ನು ನೋಡಿದಾಗ ನಾವು ಸುಮ್ಮನೆ ಇರುವುದು ಸರಿನಾ? ಕುಮಾರಸ್ವಾಮಿ ಸುಮ್ಮನೆ ಇದ್ದಾರೆ. ನಮ್ಮ ಪಕ್ಷದವರೂ ಸುಮ್ಮನಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನವರಿಗೆ ಈ ಕ್ಷೇತ್ರ ದಕ್ಕಬಾರದು ಎನ್ನುವುದು ನನ್ನ ಹೋರಾಟ ಎಂದು ಸ್ಪಷ್ಟಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗೇಶ್ವರ್, ಕುಮಾರಸ್ವಾಮಿ ಅವರಿಗೆ ಮುಂಗೋಪ ಇರಬಹುದು. ಅವರು ಒಪ್ಪುತ್ತಾರೆ ಎನ್ನುವ ನಂಬಿಕೆ ಇದೆ. ನಮ್ಮ ವರಿಷ್ಠರು ವಿಶ್ವಾಸ ಇಟ್ಟು ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ.
ವಿಧಾನಸಭೆ ಸೋಲನುಭವಿಸಿದ ಬಳಿಕ ಮೈತ್ರಿಗೆ ಚಾಲನೆ ನೀಡಿದ್ದೇ ನಾನು. ಅದು ಫಲ ನೀಡಿತು. ಹಾಸನದ ಜೆಡಿಎಸ್‌ನಲ್ಲಿ ಏನಾಗಿದೆ, ಪಕ್ಷದವರು ಸಹಕರಿಸದೇ ಇದ್ದುದಕ್ಕೆ ಏನಾಯಿತು ಎಂದು ನೋಡಿದ್ದೀರಿ. ಇಲ್ಲಿ ನಾನು ಸಹಕರಿಸದಿದ್ದರೆ ಏನಾಗುತ್ತಿತ್ತು? ರಾಜಕೀಯದಲ್ಲಿ ದೋಷಾರೋಪಣೆ ಇರುತ್ತದೆ. ಅದನ್ನು ಬಿಟ್ಟು ಮೈತ್ರಿ ಮಾಡಲಾಗಿದೆ ಎಂದರು.
ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನನ್ನ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿಹ್ನೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ. ಮಾತೃಪಕ್ಷಗಳು ಅವಕಾಶ ನೀಡದಿದ್ದಾಗ, ಜನರು ಕೈಹಿಡಿದಿದ್ದಾರೆ. ಹೀಗಾಗಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ತಾಲೂಕಿನ ಸಮಾನ ಮನಸ್ಕರ ವೇದಿಕೆ ತೀರ್ಮಾನ ಕೈಗೊಂಡಿದೆ. ದೆಹಲಿಗೆ ತೆರಳುತ್ತಿದ್ದೇನೆ. ಈಗಾಗಲೇ ರಾಷ್ಟ್ರ ನಾಯಕರ ಜತೆ ಮಾತನಾಡಿದ್ದೇನೆ. ಕುಮಾರಸ್ವಾಮಿ ಒಪ್ಪಿಕೊಂಡಿಲ್ಲ ಎಂದರೆ ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.