ಸಾರಾಂಶ
ಢಾಕಾ: ಸೈಫ್ ಅಲಿ ಖಾನ್‌ಗೆ ಇರಿತ ಪ್ರಕರಣದಲ್ಲಿ ಬಂಧಿಯಾಗಿರುವ ಬಾಂಗ್ಲಾ ಪ್ರಜೆ ಶೆಹಜಾದ್ ತಂದೆ ರೋಹಲ್ ಅಮೀನ್, ‘ಬಂಧಿತ ವ್ಯಕ್ತಿ ನನ್ನ ಮಗನೇ ಅಲ್ಲ. ಸಿಸಿಟೀವಿಯಲ್ಲಿರುವ ವ್ಯಕ್ತಿ ಆತನಲ್ಲ’ ಎಂದು ಆರೋಪಿಸಿದ್ದಾರೆ. ಹೀಗಾಗಿ ಮಗನ ಬಂಧನದ ವಿರುದ್ಧ ಬಾಂಗ್ಲಾದೇಶ ಸರ್ಕಾರ ಹಾಗೂ ಭಾರತ ಸರ್ಕಾರಕ್ಕೆ ದೂರುವುದಾಗಿ ಹೇಳಿದ್ದಾರೆ.
ಶುಕ್ರವಾರ ಟೀವಿ ಚಾನೆಲ್ ಜತೆ ಮಾತನಾಡಿರುವ ಅವರು, ‘ನನ್ನ ಮಗನ ಕೇಶ ವಿನ್ಯಾಸಕ್ಕೂ, ಸಿಸಿಟೀವಿಯಲ್ಲಿ ಸೆರೆಯಾದ ವ್ಯಕ್ತಿಯ ಕೇಶ ವಿನ್ಯಾಸಕ್ಕೂ ವ್ಯತ್ಯಾಸವಿದೆ. ನನ್ನ ಮಗ ಯಾವಾಗಲೂ ಚಿಕ್ಕ ಕೂದಲನ್ನು ಹೊಂದಿದ್ದ. 30 ವರ್ಷಗಳಿಂದ ಅದೇ ಕೇಶ ವಿನ್ಯಾಸವಿತ್ತು. ಆದರೆ ಸಿಸಿಟೀವಿಯಲ್ಲಿ ಆ ರೀತಿಯಲ್ಲಿ ಇಲ್ಲ’ ಎಂದರು.
ಹಸೀನಾ ದಾಳಿಗೆ ಬೇಸತ್ತು ವಲಸೆ:
‘ನಾನು ಬಾಂಗ್ಲಾ ವಿಪಕ್ಷ ಬಿಎನ್‌ಪಿಯ ಪ್ರಾದೇಶಿಕ ಉಪಾಧ್ಯಕ್ಷ. ಶೆಹಜಾದ್ ಸೇರಿ ಇಬ್ಬರೂ ಮಕ್ಕಳು ಬಿಎನ್‌ಪಿ ಸದಸ್ಯರು. ಮೊದಲು ಶೆಹಜಾದ್ ಬಾಂಗ್ಲಾದಲ್ಲಿ ಬೈಕ್ ಟ್ಯಾಕ್ಸಿ ಓಡಿಸಿಕೊಂಡಿದ್ದ. ಆದರೆ ಬಿಎನ್‌ಪಿ ವಿರೋಧಿ ಯಾದ ಪದಚ್ಯುತ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕಾಟದಿಂದ ಮಗನಿಗೆ ದೇಶದಲ್ಲಿ ಉಳಿಯಲು ಕಷ್ಟವಾಯಿತು. ಹೀಗಾಗಿ 7 ತಿಂಗಳ ಹಿಂದೆ ಭಾರತಕ್ಕೆ ತೆರಳಿದ್ದ. ಆತನಿಗೆ ಭಾರತದ ಪಾಸ್‌ಪೋರ್ಟ್ ಸಿಗದೇ ಅಕ್ರಮ ನುಸುಳಿದ್ದ’ ಎಂದರು.
‘ಭಾರತಕ್ಕೆ ತೆರಳಿದ ಆತ ಮುಂಬೈನಲ್ಲಿ ಹೋಟೆಲ್‌ನಲ್ಲಿ ಕೆಲಸ ಸೇರಿದ್ದ ಪ್ರತಿ ತಿಂಗಳು ಹಣವನ್ನು ಕೂಡ ಕಳುಹಿಸಿ ಕೊಡುತ್ತಿದ್ದ. ಆದರೆ ಕಳೆದ ಕೆಲ ದಿನಗಳಿಂದ ಸಂಪರ್ಕ ತಪ್ಪಿ ಹೋಗಿತ್ತು. ಅಕ್ರಮ ವಲಸಿಗನಾದ ಕಾರಣ ಆತನಿಗೆ ಭಯ ಇತ್ತು. ಅಂಥದ್ದರಲ್ಲಿ ಆತ ಸೈಫ್‌ರಂಥ ಸೆಲೆಬ್ರಿಟಿ ಮನೆಗೆ ನುಗ್ಗಿ ಕಳ್ಳತನ, ದಾಳಿ ಮಾಡಲು ಸಾಧ್ಯವೆ?’ ಎಂದರು.