ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ: ಟಾಪರ್ಸ್ ಸಂಖ್ಯೆ 17ಕ್ಕಿಳಿಕೆ

| Published : Jul 27 2024, 12:54 AM IST / Updated: Jul 27 2024, 06:15 AM IST

ಸಾರಾಂಶ

ಕಳೆದ ಮೇ ತಿಂಗಳಲ್ಲಿ ನಡೆಸಲಾಗಿದ್ದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್‌-ಯುಜಿ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗುರುವಾರ ಬಿಡುಗಡೆ ಮಾಡಿದೆ.

 ನವದೆಹಲಿ : ಕಳೆದ ಮೇ ತಿಂಗಳಲ್ಲಿ ನಡೆಸಲಾಗಿದ್ದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್‌-ಯುಜಿ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗುರುವಾರ ಬಿಡುಗಡೆ ಮಾಡಿದೆ. ಇದರಿಂದಾಗಿ ರ್‍ಯಾಂಕಿಂಗ್‌ನಲ್ಲಿ ಏರುಪೇರಾಗಿದ್ದು, ಕೇವಲ 17 ಜನರು 720ಕ್ಕೆ 720 ಅಂಕ ಪಡೆದಿದ್ದಾರೆ.

ಈ ಮುಂಚಿನ ಫಲಿತಾಂಶದಲ್ಲಿ ದಾಖಲೆಯ 67 ಜನರು ಮೊದಲ ರ್‍ಯಾಂಕ್‌ ಪಡೆದಿದ್ದರು. ಆದರೆ ಗ್ರೇಸ್‌ ಅಂಕ ವಿವಾದದ ನಂತರ ಗ್ರೇಸ್‌ ಅಂಕ ಸಹಾಯದಿಂದ 720ಕ್ಕೆ 720 ಅಂಕ ಪಡೆದಿದ್ದ 6 ವಿದ್ಯಾರ್ಥಿಗಳು ಪಟ್ಟಿಯಿಂದ ಹೊರಬಿದ್ದಿದ್ದರು ಹಾಗೂ ಮೊದಲ ರ್‍ಯಾಂಕ್‌ ವಿಜೇತರ ಸಂಖ್ಯೆ 61ಕ್ಕೆ ಇಳಿದಿತ್ತು. ಈಗ ‘ತಪ್ಪು ಉತ್ತರ ವಿವಾದ’ದ ಪರಿಣಾಮ ಮತ್ತೆ 5 ಅಂಕಗಳನ್ನು ಕಡಿಯಲಾಗಿದೆ. ಹೀಗಾಗಿ 720ಕ್ಕೆ 720 ಅಂಕ ಪಡೆದವರ ಸಂಖ್ಯೆ 61ರಿಂದ 17ಕ್ಕೆ ಇಳಿದಿದೆ.

ಆದರೆ ಮೊದಲ ರ್‍ಯಾಂಕ್‌ ಪಡೆದ 17 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಯಾರೂ ಇಲ್ಲ.

ಮೊದಲ ರ್‍ಯಾಂಕ್‌ ಪಡೆದವರು ದಿಲ್ಲಿಯ ಏಮ್ಸ್‌ನಂಥ ಪ್ರತಿಷ್ಠಿತ ಸರ್ಕಾರಿ ವೈದ್ಯ ಕಾಲೇಜಲ್ಲಿ ಸೀಟು ಗಿಟ್ಟಿಸುತ್ತಾರೆ. ನಂತರದ ರ್‍ಯಾಂಕ್‌ನವರಿಗೆ ಅಂಥ ಸಾಧ್ಯತೆ ಕ್ಷೀಣವಾಗಿರುತ್ತದೆ. ಇನ್ನು ಕೆಲವು ದಿನಗಳಲ್ಲಿ ಮೆಡಿಕಲ್‌ ಕೌನ್ಸೆಲಿಂಗ್‌ ಆರಂಭವಾಗುವ ಸಾಧ್ಯತೆ ಇದೆ.

ಪರಿಷ್ಕೃತ ಫಲಿತಾಂಶ ಏಕೆ?:

ನೀಟ್‌ ಗ್ರೇಸ್‌ ಅಂಕಗಳಲ್ಲಿ ಅಕ್ರಮ ಪತ್ತೆಯಾದ ಕಾರಣ ಮರುಪರೀಕ್ಷೆ ನಡೆಸಲಾಗಿತ್ತು. ಅದರನ್ವಯ ಹಲವರ ಅಂಕದಲ್ಲಿ ಬದಲಾವಣೆಯಾಗಿತ್ತು.ಇದೇ ವೇಳೆ, ಪ್ರಶ್ನೆಯೊಂದಕ್ಕೆ 12ನೇ ತರಗತಿಯ ಪಠ್ಯದಲ್ಲಿನ ತಪ್ಪು ಅಂಶಗಳನ್ನು ಆಧರಿಸಿ ಭೌತಶಾಸ್ತ್ರದಲ್ಲಿ ತಪ್ಪು ಉತ್ತರ ಬರೆದ ಸುಮಾರು 4 ಲಕ್ಷ ವಿದ್ಯಾರ್ಥಿಗಳಿಗೂ ಅಂಕ ನೀಡಲಾಗಿತ್ತು. ಆದರೆ, ‘ತಪ್ಪು ಉತ್ತರಕ್ಕೆ ಅಂಕ ನೀಡಿದ್ದು ಸರಿಯಲ್ಲ. ಆ ಪ್ರಶ್ನೆಯ 4 ಆಯ್ಕೆಗಳಲ್ಲೇ ಸರಿ ಉತ್ತರ ಇತ್ತು’ ಎಂಬ ದಿಲ್ಲಿ ಐಐಟಿ ತಜ್ಞರ ಶಿಫಾರಸು ಆಧರಿಸಿ ಸುಪ್ರೀಂಕೋರ್ಟ್‌ ಇತ್ತೀಚೆಗೆ ಅಂಕ ಕಡಿತಕ್ಕೆ ಆದೇಶಿಸಿತ್ತು. ಹೀಗಾಗಿ ತಪ್ಪು ಉತ್ತರದ 4 ಅಂಕ ಹಾಗೂ ತಪ್ಪು ಉತ್ತರ ಬರೆದಿದ್ದಕ್ಕಾಗಿ ದಂಡ ರೂಪದಲ್ಲಿ 1 ಅಂಕ (ಒಟ್ಟು 5 ಅಂಕ) ಕಡಿಯಲಾಗಿದೆ. ಹೀಗಾಗಿ ಟಾಪರ್‌ಗಳೂ ಸೇರಿದಂತೆ 4 ಲಕ್ಷ ವಿದ್ಯಾರ್ಥಿಗಳ ಅಂಕದಲ್ಲೂ ಬದಲಾವಣೆಯಾಗಿದೆ.

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಎನ್‌ಟಿಎ ಶುಕ್ರವಾರ ಪರಿಷ್ಕೃತ ಫಲಿತಾಂಶ ಮತ್ತು ಟಾಪರ್ಸ್‌ಗಳ ಹೊಸ ಪಟ್ಟಿ ಬಿಡುಗಡೆ ಮಾಡಿದೆ.