ಸಾರಾಂಶ
ನ್ಯಾಯಾಲಯದ ಕಲಾಪಗಳ ನೇರಪ್ರಸಾರಕ್ಕೆ ಕರ್ನಾಟಕ ಹೈಕೋರ್ಟ್ ಮಾನದಂಡ ರೂಪಿಸಿದ ಬೆನ್ನಲ್ಲೇ, ‘ಬಾಗಿಲು ಹಾಕುವುದು ಪರಿಹಾರವಲ್ಲ’ ಎಂದು ಸುಪ್ರೀಂಕೋರ್ಟ್ ಮಾರ್ಮಿಕವಾಗಿ ಹೇಳಿದೆ
ನವದೆಹಲಿ : ನ್ಯಾಯಾಲಯದ ಕಲಾಪಗಳ ನೇರಪ್ರಸಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಕೆಲವೊಂದು ಮಾನದಂಡ ನಿಗದಿಪಡಿಸಿದ ಬೆನ್ನಲ್ಲೇ ಬಾಗಿಲು ಹಾಕುವುದು ಮತ್ತು ಎಲ್ಲವನ್ನು ಮುಚ್ಚುವುದು ಯಾವುದಕ್ಕೂ ಉತ್ತರವಲ್ಲ ಎಂದು ಸುಪ್ರೀಂಕೋರ್ಟ್ ಮಾರ್ಮಿಕವಾಗಿ ಹೇಳಿದೆ.
ಕರ್ನಾಟಕ ಹೈಕೋರ್ಟ್ ನ್ಯಾ.ಶ್ರೀಶಾನಂದ ಕುರಿತ ಪ್ರಕರಣದ ವಿಚಾರಣೆ ವೇಳೆ, ಅವರ ಕುರಿತು ಜಾಲತಾಣದಲ್ಲಿ ವ್ಯಕ್ತವಾದ ಕಟುಟೀಕೆಗಳ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದ ಗಮನ ಸೆಳೆದರು. ಜೊತೆಗೆ ಸಾಮಾಜಿಕ ಜಾಲತಾಣಗಳ ನಿಯಂತ್ರಣ ಸಾಧ್ಯವಿಲ್ಲ ಮತ್ತು ಅದರ ಅನಾಮಿಕತೆ ಅದನ್ನು ಮತ್ತಷ್ಟು ಅಪಾಯಕಾರಿಯಾಗಿ ಮಾಡುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ನಾನು ನಿಮಗೊಂದು ವಿಷಯ ಹೇಳುತ್ತೇನೆ. ಸೂರ್ಯನ ಬೆಳಕಿಗೆ ಮತ್ತಷ್ಟು ಸೂರ್ಯನ ಬೆಳಕೇ ಉತ್ತರ. ನ್ಯಾಯಾಲಯದಲ್ಲಿ ಏನಾಯಿತೋ ಅದನ್ನು ದಮನ ಮಾಡುವುದಲ್ಲ. ಬಾಗಿಲು ಹಾಕುವುದು ಮತ್ತು ಎಲ್ಲವನ್ನು ಮುಚ್ಚುವುದು ಯಾವುದಕ್ಕೂ ಉತ್ತರವಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.
ಇತ್ತೀಚೆಗೆ ನ್ಯಾ.ಶ್ರೀಶಾನಂದ ಹೇಳಿಕೆ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ನ್ಯಾಯಾಲಯದ ಕಲಾಪಗಳ ನೇರಪ್ರಸಾರವನ್ನು ಕಾನೂನುಬಾಹಿರವಾಗಿ ಹಂಚಿಕೊಳ್ಳುವುದರ ವಿರುದ್ಧ ಒಂದಿಷ್ಟು ಹೊಸ ಮಾರ್ಗಸೂಚಿ ರಚಿಸಿತ್ತು. ವಕೀಲರ ಸಂಘಗಳು ಕೂಡ ಕಲಾಪ ನೇರಪ್ರಸಾರ ನಿರ್ಬಂಧಕ್ಕೆ ಆಗ್ರಹಿಸಿದ್ದವು.