ಶಿಕ್ಷಕನಿಂದ ರೇಪ್: ಆತ್ಮಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

| N/A | Published : Jul 16 2025, 12:45 AM IST / Updated: Jul 16 2025, 02:53 AM IST

ಶಿಕ್ಷಕನಿಂದ ರೇಪ್: ಆತ್ಮಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವೆಸಗಿ, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಒಡಿಶಾದ ಬಾಲಾಸೋರ್‌ ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ  ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

 ಭುವನೇಶ್ವರ :  ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವೆಸಗಿ, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಒಡಿಶಾದ ಬಾಲಾಸೋರ್‌ ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಭುವನೇಶ್ವರದ ಏಮ್ಸ್‌ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಜು.17ರಂದು ವಿಪಕ್ಷಗಳು ಬಂದ್‌ಗೆ ಕರೆ ನೀಡಿವೆ.

ಪ್ರಕರಣದ ಹಿನ್ನೆಲೆ: ಯುವತಿ ಒಡಿಶಾದ ಬಾಲಾಸೋರ್ ಜಿಲ್ಲೆಯ ಫಕೀರ್‌ ಮೋಹನ್ ಕಾಲೇಜಿನಲ್ಲಿ 2ನೇ ವರ್ಷದ ಬಿ.ಇಡಿ. ಓದುತ್ತಿದ್ದರು. ಈ ವೇಳೆ ಸಹಾಯಕ ಪ್ರಾಧ್ಯಾಪಕ ಸಮೀರ್ ಕುಮಾರ್ ಸಾಹು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜು.12ಕ್ಕೆ ಕ್ಯಾಂಪಸ್‌ನಲ್ಲಿಯೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. 3 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಸೋಮವಾರ ರಾತ್ರಿ ಅಸುನೀಗಿದ್ದಾರೆ. 

ರಾಜ್ಯ ಸರ್ಕಾರದಿಂದ 20 ಲಕ್ಷ ರು. ಪರಿಹಾರ: ವಿದ್ಯಾರ್ಥಿನಿಯ ನಿಧನಕ್ಕೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 20 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿರುವ ಅವರು, ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

ಪ್ರಧಾನಿ ಮಾತಾಡಲಿ- ರಾಹುಲ್ ಆಕ್ರೋಶ: ನ್ಯಾಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮೌನ ಮುರಿದು ಮಾತಾಡಬೇಕು ಎಂದು ಆಗ್ರಹಿಸಿದ್ದಾರೆ. ‘ಪ್ರಧಾನಿ ಮೌನವಾಗಿ ಕುಳಿತಿರುವ ವೇಳೆ, ದೇಶದ ಹೆಣ್ಣುಮಕ್ಕಳು ಮೈಗೆ ಬೆಂಕಿಹಚ್ಚಿಕೊಂಡು ಸಾವನ್ನಪ್ಪುತ್ತಿದ್ದಾರೆ. ದೇಶಕ್ಕೆ ಮೋದಿಯವರ ಮೌನ ಬೇಕಾಗಿಲ್ಲ. ಉತ್ತರ ಬೇಕಾಗಿದೆ’ ಎಂದು ಆಗ್ರಹಿಸಿದ್ದಾರೆ. 

ಜು.17ಕ್ಕೆ ಒಡಿಶಾ ಬಂದ್‌ಗೆ ಕರೆ: ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡುವಂತೆ ಆಗ್ರಹಿಸಿ ಜು.17ಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ 8 ವಿರೋಧ ಪಕ್ಷಗಳು ಒಡಿಶಾ ಬಂದ್‌ಗೆ ಕರೆ ನೀಡಿವೆ. ‘ಆಕೆ ಪೆಟ್ರೋಲ್ ಸುರಿದುಕೊಂಡಾಗ ಎಲ್ಲರೂ ಮೌನವಾಗಿ ಕುಳಿತು ವೀಕ್ಷಿಸಿದರು. ಯಾರೂ ಕ್ರಮಕ್ಕೆ ಮುಂದಾಗಲಿಲ್ಲ. ಸಾವಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದಲ್ಲಿ 8 ವಿಪಕ್ಷಗಳು ಗುರುವಾರ ಬಂದ್‌ಗೆ ಕರೆ ನೀಡಿವೆ’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಕ್ತಚರಣ್ ದಾಸ್ ತಿಳಿಸಿದ್ದಾರೆ.

Read more Articles on