ಸಾರಾಂಶ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಬಳಿಕ ರಚನೆಯಾಗಲಿರುವ ಮೊದಲ ಸರ್ಕಾರದ ನಿರ್ಧಾರ, ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ 370ನೇ ವಿಧಿ ಮರುಸ್ಥಾಪನೆ ಕುರಿತು ನಿರ್ಣಯ ಅಂಗೀಕರಿಸುವುದಾಗಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಹೇಳಿದ್ದಾರೆ. ಕೇಂದ್ರ ಸರ್ಕಾರ 370ನೇ ವಿಧಿ ರದ್ಧತಿ ಮೂಲಕ ಜಮ್ಮು ಮತ್ತು ಕಾಶ್ಮೀರ ಜನತೆಯ ರಾಜತ್ವ ಮತ್ತು ಹಕ್ಕು ಕಸಿದುಕೊಂಡಿದೆ. ಆದ್ದರಿಂದ ಚುನಾವಣೆ ನಂತರ ಅಧಿಕಾರಕ್ಕೆ ಬಂದ ಸರ್ಕಾರ ಮೊದಲು ಜನರಿಂದ ಕಸಿದುಕೊಂಡಿರುವ ರಾಜ್ಯತ್ವ ಮತ್ತು ಅದರ ಹಕ್ಕುಗಳ ಮರುಸ್ಥಾಪನೆ ಮಾಡುತ್ತದೆ. ಇದಕ್ಕಾಗಿ ಬೇಕಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.
==
ಕಾನ್ಪುರ ಬಳಿ ಹಳಿ ತಪ್ಪಿದ ಸಬರಮತಿ ರೈಲಿನ 20 ಬೋಗಿ: ಸಾವು ನೋವಿಲ್ಲ
ಕಾನ್ಪುರ: ದೇಶದ ವಿವಿಧ ಭಾಗಗಳಲ್ಲಿ ರೈಲು ಹಳಿ ತಪ್ಪುವ ಘಟನೆಗಳು ಮುಂದುವರೆದಿದ್ದು, ಶನಿವಾರ ಮುಂಜಾನೆ ಸಬರಮತಿ ಎಕ್ಸ್‌ಪ್ರೆಸ್ ರೈಲಿನ 20 ಬೋಗಿಗಳು ಉತ್ತರಪ್ರದೇಶದ ಕಾನ್ಪುರದ ಗೋವಿಂದಪುರಿ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿವೆ. ಟ್ರ್ಯಾಕ್‌ನಲ್ಲಿ ಇರಿಸಿದ್ದ ವಸ್ತುಗಳಿಗೆ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ದುಷ್ಕರ್ಮಿಗಳು ಹಳಿಯ ಮೇಲೆ ಇಟ್ಟಿದ್ದ ವಸ್ತುವಿಗೆ ರೈಲಿನ ಎಂಜಿನ್ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
==
ಭಾರತ- ಶ್ರೀಲಂಕಾ ನಡುವೆ ಮಿನಿ ಹಡಗು ಸೇವೆ ಪುನರಾರಂಭ
ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಮಿನಿ ಹಡಗು ಸೇವೆ ಪುನರಾರಂಭಗೊಂಡಿದೆ. ಈ ಹಡಗು ಸೇವೆ ತಮಿಳುನಾಡಿನ ನಾಗಪಟ್ಟಣಂ ಹಾಗೂ ಶ್ರೀಲಂಕಾದ ಉತ್ತರ ಪ್ರಾಂತ್ಯದ ರಾಜಧಾನಿ ಜಾಫ್ನಾದ ಕಂಕಸಂತುರೈ ನಡುವೆ ನಡೆಯಲಿದೆ. ಕಂಕಸತುರೈ ಬಂದರನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಭಾರತವು ಶ್ರೀಲಂಕಾಕ್ಕೆ 582 ಕೋಟಿ ರು.ಗಿಂತಲೂ ಹೆಚ್ಚು ಅನುದಾನವನ್ನು ನೀಡಿರುವ ಹಿನ್ನೆಲೆ ಈ ಹಡಗು ಸೇವೆಯನ್ನು ಪುನರಾರಂಭಿಸಿದೆ. ಎಲ್‌ಟಿಟಿಇ ಮತ್ತು ಶ್ರೀಲಂಕಾ ನಡುವಿನ ಯುದ್ಧದ ನಂತರ ಈ ಸೇವೆಯನ್ನು ನಿಲ್ಲಿಸಿತ್ತು.
==
ನಿಮ್ಮಲ್ಲಿ ಯಾರೂ ಬದುಕಲ್ಲ: 3 ನಗರಗಳ 3 ಮಾಲ್‌ಗೆ ಹುಸಿ ಬಾಂಬ್ ಬೆದರಿಕೆ
ನೋಯ್ಡಾ/ಗುರುಗ್ರಾಮ/ನವೀ ಮುಂಬೈ: ನೀವು ಯಾರೂ ಬದುಕುವುದಿಲ್ಲ. ಎಲ್ಲರೂ ಸಾಯಲು ಯೋಗ್ಯರು. ನಿಮ್ಮನ್ನೆಲ್ಲಾ ಬಾಂಬ್ ಸ್ಫೋಟಿಸಿ ಹತ್ಯೆಗೈಯುತ್ತೇವೆ ಎಂದು ದೇಶದ ಪ್ರಮುಖ ನಗರಗಳ ಮೂರು ಮಾಲ್‌ಗಳಿಗೆ ಇ ಮೇಲ್ ಮೂಲಕ ಬೆದರಿಕೆ ಹಾಕಿದ ಘಟನೆ ಶನಿವಾರ ನಡೆದಿದೆ. ದೆಹಲಿ ಗುರುಗ್ರಾಮದಲ್ಲಿನ ಆ್ಯಂಬಿಯನ್ಸ್ ಮಾಲ್, ನೋಯ್ಡಾದ ಡಿಎಲ್‌ಎಫ್ ಮಾಲ್ ಹಾಗೂ ನವೀ ಮುಂಬೈನಲ್ಲಿನ ಇನ್‌ಆರ್ಬಿಟ್ ಮಾಲ್‌ಗಳಿಗೆ ಈ ಬೆದರಿಕೆ ಹಾಕಲಾಗಿತ್ತು. ಮೇಲ್ ಬಂದ ಕೂಡಲೇ ಎಚ್ಚೆತ್ತ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ, ಮಾಲ್ ಖಾಲಿ ಮಾಡಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಇದೊಂದು ಹುಸಿ ಬೆದರಿಕೆ ಎಂದು ಖಚಿತವಾಗಿದೆ. ಘಟನೆ ಸಂಬಂಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.