‘ಸತತ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ಈ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ’ ಎಂದು ಕೇಳಿ ಬರುತ್ತಿದ್ದ ಮಾತಿಗೆ ಖುದ್ದು ಮೋದಿ ಪ್ರತಿಕ್ರಿಯಿಸಿದ್ದು,‘ಎಷ್ಟು ಸಲ ಪ್ರಧಾನಿಯಾಗಿದ್ದಾರೆ ಎನ್ನುವುದು ಮುಖ್ಯವಲ್ಲ.
ನವದೆಹಲಿ: ‘ಸತತ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ಈ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ’ ಎಂದು ಕೇಳಿ ಬರುತ್ತಿದ್ದ ಮಾತಿಗೆ ಖುದ್ದು ಮೋದಿ ಪ್ರತಿಕ್ರಿಯಿಸಿದ್ದು,‘ಎಷ್ಟು ಸಲ ಪ್ರಧಾನಿಯಾಗಿದ್ದಾರೆ ಎನ್ನುವುದು ಮುಖ್ಯವಲ್ಲ. ಬದಲಿಗೆ ಅಧಿಕಾರವಧಿಯಲ್ಲಿ ದೇಶ ಎಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿದೆ ಎನ್ನುವುದು ಮುಖ್ಯ’ ಎಂದಿದ್ದಾರೆ.
ಎನ್‌ಡಿಟೀವಿಗೆ ಸಂದರ್ಶನ ನೀಡಿದ ಅವರು, ‘ಗುಜರಾತ್‌ನಲ್ಲಿ ವಿಶ್ಲೇಷಕರು ಅತಿ ಹೆಚ್ಚು ಅವಧಿಗೆ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂದು ಬರೆಯುತ್ತಿದ್ದರು. ಅದು ವಿಶ್ಲೇಷಕರ ಕೆಲಸ. ಆದರೆ ಎಷ್ಟು ಅವಧಿಗೆ ಅಧಿಕಾರ ನಡೆಸಿದ್ದಾರೆ ಎಂದು ಹೋಲಿಸುವುದು ಸರಿಯಲ್ಲ. ಬದಲಿಗೆ ಮೋದಿ ಆಡಳಿತದಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎನ್ನುವುದು ಮುಖ್ಯ’ ಎಂದರು.
ಇದೇ ವೇಳೆ,‘ ಇದೊಂದು ಪ್ರಯಾಣ. ಮೋದಿ ಮೂರು, ಐದು , ಏಳು ಸಲವೂ ಗೆಲ್ಲಬಹುದು. ನನಗೆ 140 ಕೋಟಿ ಭಾರತೀಯರ ಆಶೀರ್ವಾದವಿದೆ. ಹಾಗಾಗಿ ಗೆಲ್ಲುತ್ತೇನೆ. ಇದು ಮುಂದುವರೆಯುತ್ತದೆ’ ಎಂದರು.ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಸತತವಾಗಿ ಮೂರು ಬಾರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಸದ್ಯ ಎರಡನೇ ಅವಧಿ ಪೂರೈಸಿರುವ ಮೋದಿ ಮೂರನೇ ಬಾರಿಯೂ ಪ್ರಧಾನಿಯಾಗಬಹುದು ಎಂದು ಕೆಲವರು ವಿಶ್ಲೇಷಿಸಿದ್ದರು.
